ತಿರುವನಂತಪುರಂ : ಶಬರಿಮಲೆಯ ಪೊನ್ನಂಬಲಮೇಟ್‌ನಲ್ಲಿ ಅಕ್ರಮವಾಗಿ ಪೂಜೆ ಸಲ್ಲಿಸಿರುವ ಕುರಿತು ತಿರುವಾಂಕೂರು ದೇವಸ್ವಂ ಆಯುಕ್ತರು ದೇವಸ್ವಂ ಸಚಿವರಿಗೆ ವರದಿ ನೀಡಿದ್ದಾರೆ. ಜೊತೆಗೆ, ಭಕ್ತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ನಿನ್ನೆ ಇಬ್ಬರನ್ನು ಬಂಧಿಸಲಾಗಿದೆ.
ರಾಜೇಂದ್ರನ್ ಕರುಪ್ಪಯ್ಯ ಮತ್ತು ಸಾಬು ಮ್ಯಾಥ್ಯೂ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಇಂದು ರಾನ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯ ಇಲಾಖೆ ಸಹ ಅಕ್ರಮ ಪ್ರವೇಶದ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 9 ಜನರ ವಿರುದ್ಧ ದೂರು ದಾಖಲಾಗಿದೆ. ಹಾಗೆಯೇ, ಸಚಿವರಿಗೆ ನೀಡಿರುವ ವರದಿಯಲ್ಲಿ ಪೊಲೀಸರಿಗೆ ನೀಡಿರುವ ದೂರು ಹಾಗೂ ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ನೀಡಿದ ಮಾಹಿತಿ ಒಳಗೊಂಡಿದೆ.
ಶಬರಿಮಲೆ ದೇಗುಲದ ಸಮೀಪದಲ್ಲೇ ಪೊನ್ನಂಬಲಮೇಡು ಬೆಟ್ಟವಿದೆ. ಪೊನ್ನಂಬಲಮೇಡು ಬೆಟ್ಟದ ತುದಿಯಲ್ಲಿ ಕಲ್ಲಿನ ಚೌಕಟ್ಟೊಂದಿದ್ದು, ಅದನ್ನು ಅಯ್ಯಪ್ಪ ಭಕ್ತರು ಅತ್ಯಂತ ಭಕ್ತಭಾವದಿಂದ ಪೂಜಿಸುತ್ತಾರೆ. ತಮಿಳುನಾಡು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ಬೆಟ್ಟಕ್ಕೆ ಯಾರಿಗೂ ಪ್ರವೇಶವಿಲ್ಲ. ಪ್ರತಿ ವರ್ಷ ಈ ಬೆಟ್ಟದ ಮೇಲೆ ಮಕರಜ್ಯೋತಿ ಕಾಣಿಸುವುದರೊಂದಿಗೆ ವಾರ್ಷಿಕ ಅಯ್ಯಪ್ಪ ಯಾತ್ರೆ ಮುಕ್ತಾಯವಾಗುತ್ತದೆ.
ಇದನ್ನೂ ಓದಿ :ವ್ಯಾಪಾರದಲ್ಲಿ ನಷ್ಟವಾಗಿದ್ದಕ್ಕೆ ಬಡ ಯುವತಿಯರ ಕರೆ ತಂದು ನಗ್ನ ಪೂಜೆ , ಲೈಂಗಿಕ ದೌರ್ಜನ್ಯ !