ನವದೆಹಲಿ:ಹೊಸ ಮಾಹಿತಿ ತಂತ್ರಜ್ಞಾನ ನಿಯಮ (IT Rules)ದಂತೆ ತಿಂಗಳ ಹಿಂದೆ ಟ್ವಿಟ್ಟರ್ ಇಂಡಿಯಾ ನೇಮಕ ಮಾಡಿದ್ದಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿ ಅಥವಾ ಅನುಸರಣೆ ಅಧಿಕಾರಿ (Compliance Officer) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ನಡುವಿನ ಶೀತಲ ಸಮರ ಉಲ್ಬಣಗೊಂಡಿರುವುದೇ ಅಧಿಕಾರಿಯ ರಾಜೀನಾಮೆಗೆ ಕಾರಣ ಎಂದು ಹೇಳಲಾಗುತ್ತಿದೆ.
ರೈತರ ಪ್ರತಿಭಟನೆಗಳನ್ನು ಬೆಂಬಲಿಸುವ ಟ್ವೀಟ್ಗಳನ್ನು ತೆಗೆದು ಹಾಕುವುದು, ಬಿಜೆಪಿಯ ನಾಯಕರ ಟ್ವೀಟ್ಗಳಿಗೆ ಪ್ಲ್ಯಾಗ್ ಮಾಡಿರುವುದು ಮತ್ತು ಹೊಸ ಐಟಿ ನಿಯಮಗಳನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕಿರುವುದು ಸೇರಿದಂತೆ, ಹಲವು ವಿಚಾರಗಳಲ್ಲಿ ಟ್ವಿಟ್ಟರ್ ಮತ್ತು ಕೇಂದ್ರ ಸರ್ಕಾರ ನಡುವೆ ಸಮರ ನಡೆಯುತ್ತಿದೆ.
ಟ್ವಿಟ್ಟರ್ ವಿರುದ್ಧ ತೊಡೆ ತಟ್ಟಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ, ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಅಸ್ತ್ರ ಪ್ರಯೋಗಕ್ಕೆ ಪ್ರಯತ್ನಿಸುತ್ತಿದೆ. ಹೊಸ ಐಟಿ ನಿಯಮದಂತೆ, ದೇಶಿಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡುವಂತೆ ಟ್ವಿಟ್ಟರ್ಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಆರಂಭದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮೈಕ್ರೋ ಬ್ಲಾಗಿಂಗ್ ಕಂಪನಿ, ಬಳಿಕ ಮೇ 31 ರಂದು ಕಾನೂನು ಸಂಸ್ಥೆಯ ಪಾಲುದಾರ ಧರ್ಮೇಂದ್ರ ಚತುರ್ ಅವರನ್ನು ಮುಖ್ಯ ಅನುಸರಣೆ ಅಧಿಕಾರಿಯಾಗಿ ನೇಮಕ ಮಾಡಿರುವುದಾಗಿ ದೆಹಲಿ ಹೈಕೋರ್ಟ್ಗೆ ತಿಳಿಸಿತ್ತು.
ಆದರೆ, ಶಾಸನಬದ್ದ ಹುದ್ದೆಗಳಿಗೆ ಹೊರಗಿನವರ ನೇಮಕವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಬೆಳವಣಿಗೆಯ ನಡುವೆ ಇದೀಗ ಅನುಸರಣೆ ಅಧಿಕಾರಿ ರಾಜೀನಾಮೆ ನೀಡಿದ್ದಾರೆ.