ನವದೆಹಲಿ:ರೈತ ಆಂದೋಲನಕ್ಕೆ ಸಂಬಂಧಿಸಿದಂತೆ ಟೂಲ್ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಸ್ವೀಡನ್ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 13 ರಂದು ಬೆಂಗಳೂರಿನಲ್ಲಿ ದಿಶಾ ರವಿಯನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದರು. ನಿನ್ನೆ ಅವರ ಕಸ್ಟಡಿ ಅವಧಿ ಮುಗಿದಿದ್ದು, ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶ ಹೊರಡಿಸಿದೆ.
ಇದಕ್ಕೆ ಪ್ರತಿಕ್ರಯಿಸಿರುವ ಗ್ರೆಟಾ ಥನ್ಬರ್ಗ್, ವಾಕ್ ಸ್ವಾತಂತ್ರ್ಯ, ಶಾಂತಿಯುತ ಪ್ರತಿಭಟನೆ ಹಾಗೂ ಸಭೆ ನಡೆಸುವ ಹಕ್ಕುಗಳು ಚೌಕಾಸಿ ಇಲ್ಲದ ಮಾನವ ಹಕ್ಕುಗಳಾಗಿವೆ. ಇವು ಯಾವುದೇ ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಾಗಿರಬೇಕು. ದಿಶಾ ರವಿಯೊಂದಿಗೆ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಕರಣ ಹಿನ್ನೆಲೆ
ಭಾರತ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಕುರಿತ ಮಾಹಿತಿವುಳ್ಳ ಟೂಲ್ಕಿಟ್ ಅನ್ನು ಗ್ರೆಟಾ ಥನ್ಬರ್ಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಟೂಲ್ಕಿಟ್ ಅನ್ನು ಸಿದ್ಧಪಡಿಸಲು ದಿಶಾ ರವಿ ಜೊತೆ ಶಾಂತನು ಮತ್ತು ನಿಕಿತಾ ಎಂಬವರು ಸಹಾಯ ಮಾಡಿದ್ದರು. ಅಲ್ಲದೇ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಟೂಲ್ಕಿಟ್ ಆಧರಿಸಿ ಗಣರಾಜ್ಯೋತ್ಸವ ದಿನದಂದು ಖಲಿಸ್ತಾನ್ ಪ್ರತ್ಯೇಕತಾವಾದಿ ಗುಂಪುಗಳು ರೈತರೊಂದಿಗೆ ಸೇರಿಕೊಂಡು ಹಿಂಸಾಚಾರ ಎಸಗಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.