ನವದೆಹಲಿ: ಉಕ್ರೇನ್ ಯುದ್ಧದ ಬಗೆಗಿನ ಉಂಟಾದ ಬಿರುಕುಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ವಿಶ್ವಾಸ ಕೊರತೆಯನ್ನು ಪರಸ್ಪರ ವಿಶ್ವಾಸವನ್ನಾಗಿ ಪರಿವರ್ತಿಸಲು ಮತ್ತು ಹಳೆಯ ಸವಾಲುಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳುವಂತೆ ವಿಶ್ವ ನಾಯಕರಿಗೆ ಒತ್ತಾಯಿಸಿದರು.
ದೆಹಲಿಯ 'ಭಾರತ್ ಮಂಟಪಂ' ಕನ್ವೆನ್ಷನ್ ಸೆಂಟರ್ನಲ್ಲಿ ಶುಕ್ರವಾರ ಜಿ-20 ನಾಯಕರ ಶೃಂಗಸಭೆಯಲ್ಲಿ 'ಒನ್ ಅರ್ಥ್' (ಒಂದು ಭೂಮಿ) ಅಧಿವೇಶನವನ್ನು ಉದ್ದೇಶಿಸಿ ತಮ್ಮ ಆರಂಭಿಕ ಭಾಷಣ ಮಾಡಿದ ಪ್ರಧಾನಿ ಮೋದಿ, ಜಗತ್ತು ಕೋವಿಡ್ಅನ್ನು ಸೋಲಿಸಲು ಸಾಧ್ಯವಾಗಿದ್ದರೆ, ಅದಕ್ಕೆ ಯುದ್ಧದಿಂದ ಉಂಟಾದ ನಂಬಿಕೆಯ ಕೊರತೆಯ ಮೇಲೂ ಜಯ ಸಾಧಿಸಬಹುದು ಎಂದು ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಸೌದಿ ಅರೇಬಿಯಾ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಹಾಗೂ ಇತರು ಜಾಗತಿಕ ನಾಯಕರು ಭಾಗವಹಿಸಿದ್ದ ಈ ಸಭೆಯಲ್ಲಿ ಪಿಎಂ ಮೋದಿ, ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಲು ಇದು ಸಕಾಲ ಎಂದು ಪ್ರತಿಪಾದಿಸಿದರು.
ಕೋವಿಡ್ ಸಾಂಕ್ರಾಮಿಕದ ನಂತರ ವಿಶ್ವವು ನಂಬಿಕೆ ಕೊರತೆಯ ಹೊಸ ಸವಾಲನ್ನು ಎದುರಿಸಿತು. ದುರದೃಷ್ಟವಶಾತ್ ಯುದ್ಧಗಳು ಇದನ್ನು ಇನ್ನಷ್ಟು ಆಳಗೊಳಿಸಿವೆ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಉಕ್ರೇನ್ ಹಾಗೂ ರಷ್ಯಾ ಯುದ್ಧವನ್ನು ಉಲ್ಲೇಖಿಸಿ ಹೇಳಿದರು. ಆದರೆ, ನಾವು ಕೋವಿಡ್‌ನಂತಹ ರೋಗವನ್ನು ಸೋಲಿಸಲು ಸಾಧ್ಯವಾಗಲಿದೆಯಾದರೆ, ಈ ವಿಶ್ವಾಸ ಕೊರತೆಯ ಸವಾಲನ್ನು ಸಹ ಗೆಲ್ಲಬಹುದು ಎಂಬುದನ್ನು ನಾವು ನೆನಪಿನಲ್ಲಿಡಬೇಕು ಎಂದು ತಿಳಿಸಿದರು.