ಬಾರಾಮುಲ್ಲಾ(ಜಮ್ಮು ಕಾಶ್ಮೀರ್):ಕಣಿವೆನಾಡಿನಲ್ಲಿ ಇತ್ತೀಚೆಗೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಹೆಚ್ಚಾಗುತ್ತಿವೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನ ವಡೋರಾ ಬಾಲಾ ಪ್ರದೇಶದಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ್ ಪೊಲೀಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಬಂಧಿಸಲಾಗಿದೆ. ಮೂವರೂ ಉಗ್ರರು ಬ್ರೆಟ್ ಕ್ಲಾನ್ ಸೋಪೋರ್ ಪ್ರದೇಶಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ.
ಥಿಯೋಫಿಲ್ ಮಜೀದ್, ಓವೈಸ್ ಅಹ್ಮದ್ ಮಿರ್ ಮತ್ತು ಶಬ್ಬೀರ್ ಅಹ್ಮದ್ ಎಂದು ಬಂಧಿತ ಭಯೋತ್ಪಾದಕರನ್ನು ಗುರ್ತಿಸಲಾಗಿದ್ದು, ಅವರು ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದವರು ಎಂದು ತಿಳಿದಬಂದಿದೆ. ಕೆಲವು ಶಸ್ತ್ರಗಳನ್ನು ಅವರಿಂದ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.