ಸಿವಾನ್(ಬಿಹಾರ): ಪೊಲೀಸರು ತಮ್ಮಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತೃತೀಯಲಿಂಗಿಗಳು ಪೊಲೀಸ್ ಠಾಣೆ ಎದುರು ಪೆಟ್ರೋಲ್ ತುಂಬಿದ ಬಾಟಲಿ ಹಿಡಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಬಿಹಾರದ ಸಿವಾನ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆಯ ಹೊರಗೆ ನಡೆದಿದೆ. ಪೊಲೀಸ್ ಠಾಣೆಯ ಹೊರಗಡೆ ಕೆಲ ತೃತೀಯಲಿಂಗಿಗಳು ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು ಎಂದು ಗಲಾಟೆ ಸೃಷ್ಟಿಸಿದ್ದು, ಅದರಲ್ಲಿ ಒಬ್ಬರು ಪೆಟ್ರೋಲ್ ತುಂಬಿದ ಬಾಟಲಿ ಹಿಡಿದು, ನ್ಯಾಯ ಸಿಗದಿದ್ದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇತರ ತೃತೀಯಲಿಂಗಿಗಳೂ ಸಹ ಪೊಲೀಸರ ಮೇಲೆ ಸುಲಿಗೆ ಆರೋಪ ಹೊರಿಸಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಹಾಡು, ಕುಣಿತ ಬಿಟ್ಟರೆ ನಮಗೆ ಹಣ ಸಂಪಾದನೆಗೆ ಬೇರೆ ದಾರಿ ಇಲ್ಲ. ಇದಕ್ಕೂ ಕೂಡ ಪೊಲೀಸರಿಗೆ ವಾರಕ್ಕೆ ಹಣ ಕೊಡಬೇಕು. ಕೊಡದೇ ಹೋದಲ್ಲಿ ಅದೂ ಕೂಡ ನಡೆಯಲ್ಲ. ಇದೀಗ ಪೊಲೀಸರು ಇದ್ದಕ್ಕಿದ್ದಂತೆ ಮನೆಗೆ ನುಗ್ಗಿ, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚದುರಿಸಿ, ಹಣ ನೀಡುವಂತೆ ಒತ್ತಾಯಿಸಿದ್ದಾರೆ. ನಾವು ನೃತ್ಯ ಕಾರ್ಯಕ್ರಮಗಳನ್ನು ಮಾಡಲು ಹೋದಾಗ ಪೊಲೀಸರು ಹಣ ಸಂಗ್ರಹಿಸಲು ಬರುತ್ತಾರೆ. ಇದು ನಮ್ಮ ಜೀವನೋಪಾಯದ ಪ್ರಶ್ನೆ. ನಮಗೆ ಇದಲ್ಲದೆ ಬೇರೆ ಉದ್ಯೋಗ ಇಲ್ಲ. ಇದರಿಂದ ಬಂದ ಹಣದಲ್ಲೆ ನಾವು ಹೊಟ್ಟೆ ತುಂಬಿಸಬೇಕು. ರಕ್ಷಣೆ ಕೊಡಬೇಕಾದ ಪೊಲೀಸರು ಕೂಡ ಈ ರೀತಿ ನಾವು ದುಡಿದ ಹಣವನ್ನು ಸುಲಿಗೆ ಮಾಡಿದರೆ ಹೇಗೆ? ಎಂದು ತೃತೀಯಲಿಂಗಿಗಳಾದ ಮಾಹಿ ಹಾಗೂ ಶೀಮಲೆ ಪ್ರಶ್ನಿಸಿದ್ದಾರೆ.
ಠಾಣೆ ಮುಂದೆ ಜಮಾಯಿಸಿದ್ದ 55 ತೃತೀಯಲಿಂಗಿಗಳು:ಮುಫಾಸಿಲ್ ಪೊಲೀಸ್ ಠಾಣೆ ಎದುರು ಸುಮಾರು 55 ತೃತೀಯಲಿಂಗಿಗಳು ಜಮಾಯಿಸಿ, ಗದ್ದಲ ಸೃಷ್ಟಿಸಿದ್ದರು. ಪೊಲೀಸರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿರುವ ತೃತೀಯ ಲಿಂಗಿಗಳು, ಪೊಲೀಸರು ನಮ್ಮನ್ನು ಕೆಲಸ ಮಾಡಲು ಬಿಡುತ್ತಿಲ್ಲ. ನಾವು ದುಡಿದ ಹಣವನ್ನು ವಸೂಲಿ ಮಾಡುತ್ತಾರೆ. ನಾವು ಹಣ ನೀಡದೇ ಇದ್ದಾಗ, ಕೆಲವು ಪ್ರಕರಣಗಳಲ್ಲಿ ನಮ್ಮನ್ನು ಸಿಲುಕಿಸುತ್ತಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಏನಿದು ಘಟನೆ?: ದೆಹಲಿ ಮಕ್ಕಳ ರಕ್ಷಣಾ ಆಯೋಗದವರು ತೃತೀಯಲಿಂಗಿಗಳ ಜಾಗಕ್ಕೆ ದಾಳಿ ಮಾಡಿದ್ದು, ಅಲ್ಲಿದ್ದ 25 ಅಪ್ರಾಪ್ತರನ್ನು ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆ ಕೆಲವು ತೃತೀಯಲಿಂಗಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ತೃತೀಯಲಿಂಗಿಗಳು ಪೊಲೀಸರು ತಮಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ನಮ್ಮಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಪುಫಾಸಿಲ್ ಪೊಲೀಸ್ ಠಾಣೆ ಎದುರೇ ಗಲಾಟೆ ಸೃಷ್ಟಿಸಿದ್ದಾರೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಗದ್ದಲ ಮಾಡಿದ್ದಾರೆ.