ಸೋನಭದ್ರ (ಉತ್ತರ ಪ್ರದೇಶ): ಮಳೆಗಾಗಿ ಗ್ರಾಮೀಣ ಭಾಗ ಜನರು ಅನೇಕ ರೀತಿಯ ಪದ್ಧತಿಗಳನ್ನು ಆಚರಿಸುವ ವಾಡಿಕೆ ಇದೆ. ವರುಣನಿಗಾಗಿ ದೇವರ ಮೊರೆ ಹೋಗುವುದು, ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಜೊತೆಗೆ ನಾಯಿ, ಕಪ್ಪೆಗಳ ಮದುವೆ ಮಾಡಿಸುವ ಪದ್ಧತಿ ಸಹ ಅನೇಕ ಕಡೆಗಳಲ್ಲಿ ಇದೆ. ಇದರೊಂದಿಗೆ ಮಳೆ ಬಾರದೇ ಇರುವುದಕ್ಕೂ ಕೆಲ ಅಪನಂಬಿಕೆಗಳು ಹಳ್ಳಿ ಜನರಲ್ಲಿ ಇವೆ. ಇಂತಹದ್ದೊಂದು ಪ್ರಕರಣದಲ್ಲಿ ಓರ್ವ ಮಹಿಳೆಯನ್ನು ಪಂಚಾಯಿತಿಗೆ ಎಳೆದುತಂದ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಮಯೋರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಸ್ ಪಹಾರಿ ಗ್ರಾಮದಲ್ಲಿ ಮಹಿಳೆಯೊಬ್ಬರು ನೇಗಿಲು ಮುಟ್ಟಿದ ಕಾರಣಕ್ಕೆ ಆಕೆಯನ್ನು ಗ್ರಾಮಸ್ಥರು ಪಂಚಾಯಿತಿಗೆ ಕರೆದುಕೊಂಡು ಬಂದು ಶಿಕ್ಷಿಸಲು ಮುಂದಾಗಿದ್ದ ಘಟನೆ ವರದಿಯಾಗಿದೆ. ಆ ಮಹಿಳೆ ಕೆಲ ದಿನಗಳ ಹಿಂದೆ ತಮ್ಮ ಜಮೀನಿಗೆ ಹೋಗಿದ್ದರು. ಆಗ ಹೊಲದಲ್ಲಿ ನೇಗಿಲು ಬಿಡಲಾಗಿತ್ತು. ಹೊಲದಲ್ಲೇ ಇದ್ದರೆ ಕಳ್ಳತನವಾಗಬಹುದೆಂದು ಆತಂಕಗೊಂಡು ಆ ನೇಗಿಲನ್ನು ಆಕೆಯೇ ಮನೆಗೆ ಹೊತ್ತುಕೊಂಡು ಬಂದಿದ್ದರು. ಇದನ್ನು ನೆರೆಹೊರೆಯವರು ನೋಡಿದ್ದಾರೆ.
ಅಂತೆಯೇ, ನೇಗಿಲು ಹೊತ್ತುಕೊಂಡ ಕಾರಣಕ್ಕೆ ಮಹಿಳೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಡಕಟ್ಟು ಸಮಾಜದಲ್ಲಿ ಕೆಲ ನಂಬಿಕೆ, ಸಂಪ್ರದಾಯಗಳಿವೆ. ಇದರಲ್ಲಿ ಮಹಿಳೆ ನೇಗಿಲು ಮುಟ್ಟಿದರೆ ಮಳೆ ಬರುವುದಿಲ್ಲ ಎಂಬ ನಂಬಿಕೆಯೂ ಇದೆ. ನಮ್ಮ ಪೂರ್ವಜರೂ ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ. ಮಹಿಳೆ ಈ ರೀತಿ ಮಾಡಿದ್ದರಿಂದ ಅಂದಿನಿಂದ ಗ್ರಾಮದಲ್ಲಿ ಮಳೆ ಬಂದಿಲ್ಲ. ಹೀಗಾಗಿ ಇದೇ ಬುಧವಾರ ಮಹಿಳೆಗೆ ಶಿಕ್ಷೆ ವಿಧಿಸಬೇಕೆಂದು ಪಂಚಾಯಿತಿ ಸೇರಿದ್ದಾರೆ.