ವಿಶಾಖಪಟ್ಟಣಂ, ಆಂಧ್ರಪ್ರದೇಶ:ಮಧ್ಯರಾತ್ರಿ ಮನಗೆ ನುಗ್ಗಿದ ನಾಲ್ವರು ಕಳ್ಳರ ಜೊತೆ ಮಹಿಳೆ ಹೋರಾಡಿರುವ ಘಟನೆ ನಗರದಲ್ಲಿ ಮುನ್ನೆಲೆಗೆ ಬಂದಿದೆ. ಈ ವೇಳೆ, ಮಹಿಳೆ ಕೈಗೆ ಗಂಭೀರವಾಗಿ ಗಾಯವಾಗಿತ್ತು. ಆದರೂ ಸಹ ಆಕೆ ಇದನ್ನು ಲೆಕ್ಕಿಸದೇ ವಿರೋಧಿಸಿ ಕಳ್ಳರ ಮುಂದೆ ವೀರ ನಾರಿಯಂತೆ ನಿಂತಿದ್ದರು. ಈ ಘಟನೆ ವಿಶಾಖಪಟ್ಟಣಂ ಜಿಲ್ಲೆಯ ಪೆಂಡುರ್ತಿ ತಾಲೂಕಿನ ಚೀಮಲಪಲ್ಲಿಯಲ್ಲಿ ನಡೆದಿದೆ.
ಪೆಂಡುರ್ತಿ ಪೊಲೀಸರ ಪ್ರಕಾರ, ಇಲ್ಲಿನ ಶ್ರೀರಾಮ ದೇವಸ್ಥಾನದ ಸಮೀಪ ನಿವೃತ್ತ ನೌಕರ ಅಲ್ಲಾ ಅಪ್ಪಾರಾವ್ ಅವರ ಕುಟುಂಬ ವಾಸವಾಗಿದೆ. ಅಲ್ಲಾ ಅಪ್ಪಾರಾವ್ ಅವರು ಪತ್ನಿ ಲಲಿತಾಕುಮಾರಿ ಮತ್ತು ಪುತ್ರರಾದ ವಿನಯ್ ಕುಮಾರ್, ಅವಿನಾಶ್ ಕುಮಾರ್ ಅವರನ್ನು ಅಗಲಿದ್ದಾರೆ. ಅವಿನಾಶ್ ಇತ್ತೀಚೆಗೆ ಲಾವಣ್ಯ ಅವರನ್ನು ವಿವಾಹವಾಗಿದ್ದು, ರಾತ್ರಿ ಪಾಳೆ ಕೆಲಸವಿದ್ದ ಕಾರಣ ಅವರು ಮಂಗಳವಾರ ರಾತ್ರಿ ಮನೆಯಲ್ಲಿರಲಿಲ್ಲ.
ಕುಟುಂಬದವರೆಲ್ಲ ಒಂದು ಕೋಣೆಯಲ್ಲಿದ್ದರೆ, ಲಾವಣ್ಯ ಮಾತ್ರ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಬೆಳಗಿನ ಜಾವ 1.30ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಕಿಟಕಿಯ ಗ್ರಿಲ್ ತೆಗೆದು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯ ಕೊಠಡಿಯೊಂದರೊಳಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದಾರೆ. ಸದ್ದು ಕೇಳಿ ಎಚ್ಚೆತ್ತುಕೊಂಡ ಲಾವಣ್ಯ ಇದನ್ನು ಗಮನಿಸಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.