ನವದೆಹಲಿ: ತೌಕ್ತೆಯ ಅಬ್ಬರ ಕ್ಷೀಣಿಸುತ್ತಿದೆ. ಮಂಗಳವಾರ ಮುಂಜಾನೆ ಚಂಡಮಾರುತ ಗುಜರಾತ್ ಕರಾವಳಿಯಿಂದ ದೇಶದ ಉತ್ತರದೆಡೆಗೆ ಸಾಗಿ ದುರ್ಬಲ ಪ್ರವೃತ್ತಿ ತೋರಿಸುತ್ತಿದೆ. ಚಂಡಮಾರುತದ ಸಂಪೂರ್ಣ ದೃಷ್ಟಿ ಕರಾವಳಿಯನ್ನು ದಾಟಿ ಭೂಪ್ರದೇಶದ ಮೇಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ಗಾಳಿಸಹಿತ ಭಾರಿ ಮಳೆಯಾಗಿದೆ. ಹಲವೆಡೆ ಕಡಲ್ಕೊರೆತ ಉಂಟಾಗಿದ್ದು, ತೀರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ತಡರಾತ್ರಿ ಗುಜರಾತ್ ಪ್ರವೇಶಿಸಿದ ತೌಕ್ತೆ:
ತಡರಾತ್ರಿ ತೌಕ್ತೆ ಚಂಡಮಾರುತವು ಗುಜರಾತ್ ಪ್ರವೇಶಿಸಿದ್ದು, ಸೌರಾಷ್ಟ್ರದ ಉನಾ ಹಾಗೂ ದಿಯು ನಡುವಿನ ಕರಾವಳಿಯಿಂದ ಹಾದು ಹೋಗಿದೆ. ಈ ವೇಳೆ ಗಂಟೆಗೆ 120 ರಿಂದ 150 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ಧಾರಾಕಾರ ಮಳೆಯೂ ಆಗಿದೆ. ಈ ಸಂದರ್ಭದಲ್ಲಿ ಉನಾ ನಗರದಲ್ಲಿ 200ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬಗಳು ಹಾಗು ಮೊಬೈಲ್ ಟವರ್ಗಳು ಧರೆಗುರುಳಿವೆ. ದಿಯು ಸಮೀಪದ ಸೌರಾಷ್ಟ್ರದ ಉನಾ ಪಟ್ಟಣದಲ್ಲಿ ಮಳೆ ಮತ್ತು ಗಾಳಿ ಬೀಸುತ್ತಿದೆ. ಗುಜರಾತ್‌ನ ಅಮ್ರೆಲಿಯಲ್ಲಿ ಬಲವಾದ ಗಾಳಿ ಮತ್ತು ಮಳೆ ಮುಂದುವರೆದಿದೆ.
ಸಮುದ್ರದಲ್ಲಿ ಉಬ್ಬರವಿಳಿತದ ಅಲೆಗಳು ಮತ್ತು ಪ್ರವಾಹದ ಬಗ್ಗೆ ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ನಂತರ ಗುಜರಾತ್ ಸರ್ಕಾರ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತು. ದಕ್ಷಿಣ ಜಿಲ್ಲೆಗಳಾದ ಸೌರಾಷ್ಟ್ರ ಮತ್ತು ದಿಯುಗಳಲ್ಲಿ ಇಂದು ಸಹ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಇದು ಮಧ್ಯಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ಗುಜರಾತ್ ಸರ್ಕಾರ ರಕ್ಷಣೆ ಮತ್ತು ಪರಿಹಾರ ನೀಡಲು ಹಲವಾರು ಇಲಾಖೆಗಳ ತಂಡಗಳನ್ನು ನಿಯೋಜಿಸಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸ್ಥಳಾಂತರಿಸಲು ನೂರಾರು ಆಂಬ್ಯುಲೆನ್ಸ್‌ಗಳನ್ನು ಸುಸ್ಥಿತಿಯಲ್ಲಿ ಇರಿಸಲಾಗಿದೆ.
ಮಹಾರಾಷ್ಟ್ರದಲ್ಲಿ 6 ಜನರು ಬಲಿ:
ಮಹಾರಾಷ್ಟ್ರದಲ್ಲಿ ಚಂಡಮಾರುತದ ಆರ್ಭಟಕ್ಕೆ ಆರು ಜನರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರಿಶೀಲನೆ ನಡೆಸಿದ್ದಾರೆ. ಮುಂಬೈನಲ್ಲಿ ಸೋಮವಾರ ಗಂಟೆಗೆ 114 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದೆ. ಭಾರಿ ಮಳೆ ಸುರಿದಿದ್ದು, ವಿಮಾನ ಕಾರ್ಯಾಚರಣೆಯನ್ನು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು.