ನವದೆಹಲಿ: ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರಿಗೆ ಲಂಚ ನೀಡಲು ತೆರಿಗೆದಾರರ ಹಣವನ್ನು ಬಳಸಲಾಗಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಧರಿಸಿ ಸುಪ್ರೀಂ ಕೋರ್ಟ್ (ಎಸ್‌ಸಿ) ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಹಾಗೂ ಆರ್‌ಬಿಐಗೂ ನೋಟಿಸ್ ಜಾರಿ ಮಾಡಿದೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳನ್ನು ನೀಡಲಾಗಿದೆ ಎಂದು ಆರೋಪಿಸಿರುವ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಕುರಿತು ಸುಪ್ರೀಂಕೋರ್ಟ್, ಈ ಎರಡು ರಾಜ್ಯ ಸರ್ಕಾರಗಳಿಗೆ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಮತದಾರರಿಗೆ ಆಮಿಷ ಒಡ್ಡಲು ಎರಡು ರಾಜ್ಯ ಸರ್ಕಾರಗಳು ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಆಕ್ಷೇಪಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಅನ್ವಯ, ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೂ ನೋಟಿಸ್ಗಳನ್ನು ನೀಡಿದೆ.
ಅರ್ಜಿದಾರರ ಪರ ವಕೀಲರು ಹೇಳಿದ್ದೇನು?:"ಚುನಾವಣೆಯ ಮೊದಲು ಸರ್ಕಾರವು ನಗದು ಹಂಚುವುದಕ್ಕಿಂತ ಕ್ರೂರವಾದ ಕಾರ್ಯ ಮತ್ತೊಂದಿಲ್ಲ. ಇದು ಪ್ರತಿ ಬಾರಿಯೂ ನಡೆಯುತ್ತಿದೆ ಮತ್ತು ಇದರಿಂದ ಅಂತಿಮವಾಗಿ ತೆರಿಗೆದಾರರ ಮೇಲೆ ಹೊರೆ ಬೀಳುತ್ತದೆ" ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.