ಹೈದರಾಬಾದ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದಾಗಿ ಮತ್ತೊಂದು ಬಾರಿ ಉದ್ಯಮಗಳ ವಿಚಾರ ಚುನಾವಣಾ ಕಣಕ್ಕಿಳಿದಿದೆ. 2011 ರಲ್ಲಿ ಬುದ್ಧದೇಬ್ ಭಟ್ಟಾಚಾರ್ಜೀ ಮತ್ತು ಮಮತಾ ಬ್ಯಾನರ್ಜಿ ಮಧ್ಯೆ ಇದೇ ವಿಷಯಕ್ಕೆ ಭಾರಿ ವಾಗ್ವಾದ ನಡೆದಿತ್ತು. ಈಗ, ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಇದೇ ವಾಗ್ವಾದ ನಡೆಯುತ್ತಿದೆ. ಅಷ್ಟೇ ಅಲ್ಲ, ಈ ಬಾರಿಯೂ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯೆರಡೂ ಹೂಗ್ಲಿಯನ್ನೇ ತಮ್ಮ ರಣಕಣವನ್ನಾಗಿ ಆಯ್ಕೆ ಮಾಡಿಕೊಂಡಿವೆ. ಇದೇ ಸ್ಥಳದಲ್ಲೇ ಸಿಂಗೂರು ಗಲಭೆಯೂ ನಡೆದಿತ್ತು ಎಂಬುದನ್ನು ನಾವು ಗಮನಿಸಬಹುದು.
ಪಶ್ಚಿಮ ಬಂಗಾಳವನ್ನು ಟಾಟಾ ಮೋಟಾರ್ಸ್ ತೊರೆದು 11 ವರ್ಷಗಳೇ ಗತಿಸಿದವು. ಆದರೆ, ರಾಜ್ಯಕ್ಕೆ ಇನ್ನೂ ಉದ್ಯಮ ವಿರೋಧಿ ಎಂಬ ಹಣೆಪಟ್ಟಿ ತಪ್ಪಲೇ ಇಲ್ಲ. ಉತ್ಪಾದನೆ ಉದ್ಯಮದ ಬಗ್ಗೆ ಇರುವ ಋಣಾತ್ಮಕ ಇಮೇಜ್ ಅನ್ನು ಬಂಗಾಳವೇ ನಿವಾರಿಸಿಕೊಳ್ಳಬೇಕಿದೆ. ಅದರಲ್ಲೂ, ರಾಜ್ಯ ಸರ್ಕಾರ ನಡೆಸುವ ಹಲವು ಸಭೆಗಳಲ್ಲಿ ಈ ಪ್ರಯತ್ನ ಇನ್ನೂ ನಡೆಯಬೇಕಿರುವುದು ಕಂಡುಬರುತ್ತದೆ. ಕಳೆದ 10 ವರ್ಷಗಳಿಂದಲೂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನಡೆಸುತ್ತಿರುವ ಬಂಗಾಳ ಜಾಗತಿಕ ಉದ್ಯಮ ಸಮಾವೇಶ ಈ ನಿಟ್ಟಿನಲ್ಲಿ ಯಾವ ಮುನ್ನಡೆಯನ್ನೂ ಸಾಧಿಸಿಲ್ಲ. ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ ಎಂದು ಸಂಖ್ಯೆಗಳು ಮತ್ತು ಅಂಕಿ ಅಂಶಗಳ ಮೂಲಕ ರಾಜ್ಯ ಸರ್ಕಾರ ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದರೂ. ಸರ್ಕಾರದಲ್ಲಿರುವ ಹಲವರೇ ಈ ಡೇಟಾಗಳನ್ನು ಪ್ರಶ್ನಿಸಿದ್ದಾರೆ.
ಇದೇ ಉದ್ಯಮ ಪ್ರಗತಿ ಕುಂಠಿತಗೊಳ್ಳುತ್ತಿರುವ ಸಂಗತಿ ಮತ್ತೆ ಬಿಜೆಪಿಯಿಂದಾಗಿ ಮುನ್ನೆಲೆಗೆ ಬಂದಿದೆ. ಮೋದಿ ಉದ್ದೇಶಪೂರ್ವಕವಾಗಿ ಉದ್ಯಮ ಸಂಬಂಧಿ ಸಂಗತಿಗಳನ್ನು ಹೆಕ್ಕಿ ತೆಗೆದು ಅದನ್ನು ಪೊರಿಬೊರ್ತನರ್ ಪೊರಿಬೊರ್ತನ್ (ಬದಲಾವಣೆಯ ಬದಲಾವಣೆ) ಘೋಷಣೆಗೆ ಪೋಣಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಲಾಗುತ್ತದೆ. ಇದರಿಂದ ಬಂಗಾಳದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಹೊಸ ಬಂಗಾಳ ಉದಯವಾಗುತ್ತದೆ ಎಂಬುದನ್ನೇ ಅವರು ಚುನಾವಣಾ ಘೋಷವಾಕ್ಯವನ್ನಾಗಿಸಿಕೊಂಡಿದ್ದಾರೆ.
ಬುದ್ಧದೇಬ್ ಭಟ್ಟಾಚಾರ್ಜೀ ಮುಖ್ಯಮಂತ್ರಿಯಾದ 2ನೇ ಅವಧಿಯಲ್ಲಿ ರಾಜ್ಯಕ್ಕೆ ಹೂಡಿಕೆಯನ್ನು ತರಲು ಭಾರಿ ಪರಿಶ್ರಮವಹಿಸಿದ್ದರು. ಹಲವು ರಾಜ್ಯಗಳು, ವಿದೇಶಗಳಿಗೆ ಅವರು ತೆರಳಿ, ಬಂಗಾಳವನ್ನು ಉದ್ಯಮ ಸ್ನೇಹಿಯನ್ನಾಗಿಸಲು ಪ್ರಯತ್ನಿಸಿದ್ದರು. ಆಗ ರಾಜ್ಯದ ಸಚಿವಾಲಯ ರೈಟರ್ಸ್ ಬಿಲ್ಡಿಂಗ್ಸ್‌ನಲ್ಲಿ ಉದ್ಯಮಗಳು ಮತ್ತು ಹೂಡಿಕೆ ಎಂಬ ಎರಡು ಶಬ್ದಗಳೇ ಮಾರ್ದನಿಸುತ್ತಿದ್ದವು.
ಆದರೆ, ವಾಸ್ತವ ವಿಭಿನ್ನವಾಗಿತ್ತು. ಭಟ್ಟಾಚಾರ್ಜೀ ಕನಸು ವಾಸ್ತವಕ್ಕಿಳಿಯಲಿಲ್ಲ. ಯಾವುದೇ ಪ್ರಮುಖ ಉದ್ಯಮಗಳು ಬರಲಿಲ್ಲ. ಬದಲಿಗೆ, ಸಿಂಗೂರು ಮತ್ತು ನಂದಿಗ್ರಾಮದ ಕಳಂಕವನ್ನು ಬುದ್ಧದೇಬ್ ಭಟ್ಟಾಚಾರ್ಜೀ ಹೊತ್ತುಕೊಂಡು ನಗಣ್ಯವಾಗಬೇಕಾಯಿತು. ಎಡ ಪಕ್ಷವು ನಿಧಾನವಾಗಿ ರಾಜಕೀಯ ಇತಿಹಾಸದಿಂದಲೇ ಕಣ್ಮರೆಯಾಗುವಂತಾಯಿತು.
ಬಂಗಾಳಕ್ಕಿರುವ ಉದ್ಯಮ ವಿರೋಧಿ ಹಣೆಪಟ್ಟಿಯನ್ನು ತೆಗೆದುಹಾಕಲು ಭಟ್ಟಾಚಾರ್ಜಿ ಬಯಸಿದ್ದರು. ‘ಕೃಷಿ ನಮ್ಮ ಅಡಿಪಾಯ ಮತ್ತು ಉದ್ಯಮ ನಮ್ಮ ಭವಿಷ್ಯ’ ಎಂದು ಪಕ್ಷ ಹಾಗೂ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸಿದ್ದರು. ಆದರೆ, ಅದನ್ನು ಅರ್ಥ ಮಾಡಿಸುವಲ್ಲಿ ಅವರು ವಿಫಲರೂ ಆದರು. ಅಷ್ಟಕ್ಕೂ, ಇದೇ ಅವರಿಗೆ ತಿರುಗುಬಾಣವಾಯಿತು ಮತ್ತು ಕೆಂಪು ಪಡೆಯಲ್ಲಿ ಬುದ್ಧದೇಬ್ ಭಟ್ಟಾಚಾರ್ಜಿ ಜನರಲ್‌ರಂತೆ ವರ್ತಿಸುತ್ತಿದ್ದರು ಎಂದು ಕೇಳಿ ಬರುವುದಕ್ಕೆ ಕಾರಣವಾಯಿತು.
2011 ರಲ್ಲಿ ಪೊರಿಬೊರ್ತನ್ (ಬದಲಾವಣೆ) ಎಂಬ ಅಲೆ ಬೀಸಿದ ನಂತರ ಬಂಗಾಳದಲ್ಲಿ ಉದ್ಯಮ ಸ್ಥಾಪನೆ ಬಗ್ಗೆ ಮಮತಾ ತುಂಬಾ ಮಾತನಾಡಿದ್ದಾರೆ. ಸಮ್ಮೇಳನಗಳು, ಶೃಂಗಗಳು, ಸಭೆಗಳು, ಭೇಟಿಗಳು ಮತ್ತು ಈವೆಂಟ್‌ಗಳು ನಡೆಯುತ್ತಲೇ ಇದ್ದವು. ಆದರೆ, ಈ ಪ್ರಯತ್ನಗಳಿಂದ ಎಷ್ಟು ಉದ್ಯಮಗಳು ಸ್ಥಾಪನೆಯಾದವು ಅಥವಾ ಎಷ್ಟು ಜನರಿಗೆ ಕಳೆದ 10 ವರ್ಷಗಳಲ್ಲಿ ಉದ್ಯೋಗ ಲಭ್ಯವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.