ರಾಯಪುರ(ಛತ್ತೀಸ್ಗಢ): ಉತ್ತರ ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಛತ್ತೀಸ್ಗಢ ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ರಾಜ್ಯದಲ್ಲಿ ಹೆಚ್ಚಾಗಿ ಮಳೆಕಾಡುಗಳೇ ಕಂಡು ಬರುತ್ತವೆ. ಮಳೆಗಾಲದ ವೇಳೆ ಇಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತವೆ.
ಇಲ್ಲಿನ ಸರ್ಗುಜಾ ಜಿಲ್ಲೆಯೂ ವಿಶಿಷ್ಟ ಕಾರಣಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ಮಟ್ಟದಿಂದ ಮೂರೂವರೆ ಸಾವಿರ ಅಡಿಯಷ್ಟು ಎತ್ತರದಲ್ಲಿರುವ ಮನ್ಪತ್ ಎಂಬ ಗ್ರಾಮವು ಛತ್ತೀಸ್ಗಢದ ಶಿಮ್ಲಾ ಅಂತಲೇ ಪ್ರಸಿದ್ಧಿಯಾಗಿದೆ. ಇಷ್ಟೇ ಅಲ್ಲ,1962ರಲ್ಲಿ ಟಿಬೆಟಿಯನ್ನರು ಇಲ್ಲಿ ನಿರಾಶ್ರಿತರಾಗಿ ಬಂದು ನೆಲೆಸಿದ್ದರಂತೆ.
ಆದ್ದರಿಂದ ಈ ಸ್ಥಳಕ್ಕೆ ಚೋಟಾ ಟಿಬೆಟ್ ಅಂತಲೂ ಕರೆಯುತ್ತಾರೆ. ಅಲ್ಲದೇ ಟಿಬೆಟಿಯನ್ ಧರ್ಮ ಗುರು ದಲೈಲಾಮಾ ಎರಡು ಬಾರಿ ಇಲ್ಲಿಗೆ ಬಂದಿದ್ದರಂತೆ. ಹೀಗಾಗಿ, ಇಲ್ಲಿ ಬೌದ್ಧ ದೇವಾಲಯ ಸಹ ಇದ್ದು, ಶಾಂತಿ ಬಯಸುವವರ ನೆಚ್ಚಿನ ತಾಣವಾಗಿದೆ.
ಸರ್ಗುಜಾ ಜಿಲ್ಲೆಯಲ್ಲಿ ನೆಲೆಸಿದ್ದ ಟಿಬೆಟ್ ಸಮುದಾಯ ಇಲ್ಲಿನ ಬುಡಕಟ್ಟು ಜನಾಂಗದವರಿಗೆ ಕಾರ್ಪೆಟ್ ಕೆಲಸವನ್ನ ಕಲಿಸಿದ್ದರು. ಈ ಕಾರ್ಪೆಟ್ ತಯಾರಿಕೆಗಾಗಿ ಉಣ್ಣೆ ಹಾಗೂ ದಾರವನ್ನ ಬಳಸಲಾಗುತ್ತದೆ. ಇದರಿಂದ ಗ್ರಾಮದಲ್ಲಿ ನೂರಾರು ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ.