ನವದೆಹಲಿ:ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ-ಅಂಶಗಳ ಪ್ರಕಾರ ದೆಹಲಿಯ ಗಾಳಿಯ ಗುಣಮಟ್ಟ ಗುರುವಾರವೂ ತೀವ್ರ ಕಳಪೆ ಮಟ್ಟದಲ್ಲಿ ಮುಂದುವರೆದಿದೆ. ಬಲವಾದ ಗಾಳಿ ಬೀಸುವ ಸಂಭವದ ಹಿನ್ನೆಲೆಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚಕರು ಬುಧವಾರ ಊಹಿಸಿದ್ದರು.
ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (AQI) ಗುರುವಾರ ಬೆಳಗ್ಗೆ 9 ಗಂಟೆ 10 ನಿಮಿಷಕ್ಕೆ 426 ರಷ್ಟಿತ್ತು. 400 ಕ್ಕಿಂತ ಹೆಚ್ಚಿನ AQI ಅನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯವಂತ ಜನರ ಮೇಲೆ ಪರಿಣಾಮ ಬೀರಬಹುದು ಮತ್ತು ಈಗಾಗಲೇ ಕಾಯಿಲೆಗಳಿರುವವರ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಆನಂದ್ ವಿಹಾರ್ ಮತ್ತು ಜಹಾಂಗೀರ್‌ಪುರಿ ರಾಜಧಾನಿಯ ಅತ್ಯಂತ ಕಲುಷಿತ ಸ್ಥಳಗಳಾಗಿದ್ದು, ಇಲ್ಲಿ AQI 460 ಆಗಿದೆ. ತೀವ್ರ ಕಳಪೆ AQI ದಾಖಲಾಗಿರುವ ಪ್ರದೇಶಗಳೆಂದರೆ ಅಲಿಪುರ್ (439), ಅಶೋಕ್ ವಿಹಾರ್ (444), ಬವಾನಾ (456), ಬುರಾರಿ (443), ಮಥುರಾ ರಸ್ತೆ (412), DTU (436), ದ್ವಾರಕಾ (408), ITO (435), ಮುಂಡ್ಕಾ (438), ನರೇಲಾ (447), ನೆಹರು ನಗರ (433), ಪತ್ಪರ್ಗಂಜ್ (441), ರೋಹಿಣಿ (453), ಸೋನಿಯಾ ವಿಹಾರ್ (444), ವಿವೇಕ್ ವಿಹಾರ್ (444) ಮತ್ತು ವಜೀರ್ಪುರ್ (444).