ಅಮರಾವತಿ:ಆಂಧ್ರ ಪ್ರದೇಶದ ವೈಎಸ್ಆರ್ಸಿಪಿ ಸರ್ಕಾರದ ಹಗರಣಗಳು ಮತ್ತು ಕೆಟ್ಟ ಕಾರ್ಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಈಟಿವಿ ನೆಟ್ವರ್ಕ್ ಮಾಲೀಕ ರಾಮೋಜಿ ರಾವ್ ಅವರಿಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಹಾಲಿ ಮುಖ್ಯಮಂತ್ರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಇದೇ ವೇಳೆ, ತೆಲುಗು ನಾಡಿನ ಜನರು ರಾಮೋಜಿ ರಾವ್ ಜೊತೆಗಿದ್ದಾರೆ ಎಂದು ಅವರು ತಿಳಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಚಂದ್ರಬಾಬು ನಾಯ್ಡು, "ಸಂಸ್ಥೆಗಳನ್ನು ಹಾಳು ಮಾಡುವ ಪ್ರವೃತ್ತಿಯನ್ನು ಮುಂದುವರಿಸಿರುವ ವೈ.ಎಸ್.ಜಗನ್ ಈಗ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಬರೆದಿದ್ದಾರೆ.
"ಜಗನ್ ರೆಡ್ಡಿ ಸರ್ವಾಧಿಕಾರಿಯಂತೆ ತಮ್ಮನ್ನು ಹೊಗಳುವ ಮಾಧ್ಯಮಗಳನ್ನು ಬೆಂಬಲಿಸುತ್ತಾರೆ ಮತ್ತು ವೈಎಸ್ಆರ್ಸಿಪಿಯ ಹಗರಣಗಳು ಮತ್ತು ಕೊಳಕು ಕೃತ್ಯಗಳನ್ನು ಬಹಿರಂಗಪಡಿಸುವ ಈನಾಡುನಂಥ ಮಾಧ್ಯಮಗಳಿಗೆ ಕಿರುಕುಳ ನೀಡುತ್ತಾರೆ ಮತ್ತು ಬೆದರಿಕೆ ಒಡ್ಡುತ್ತಾರೆ" ಎಂದು ನಾಯ್ಡು ತಿಳಿಸಿದ್ದಾರೆ. "ತಮ್ಮ ಸ್ವಂತ ವೈಫಲ್ಯಗಳಿಂದ ಹತಾಶೆಗೊಂಡಿರುವ ಮತ್ತು ಜನರಲ್ಲಿ ಉಂಟಾಗಿರುವ ಭಾರಿ ಆಡಳಿತ ವಿರೋಧಿ ಅಲೆಯ ಭಾವನೆಯಿಂದ ಚಿಂತಿತರಾಗಿರುವ ಅವರು, ಈಗ ಅರವತ್ತು ವರ್ಷಗಳಿಂದ ತೆಲುಗು ಜನತೆಗೆ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಮಾರ್ಗದರ್ಶಿಯಂಥ ದೀರ್ಘಕಾಲದ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ" ಎಂದು ನಾಯ್ಡು ಜರಿದಿದ್ದಾರೆ.