ಹೈದರಾಬಾದ್(ತೆಲಂಗಾಣ):ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಮಹಿಳೆಯರು ತೆಲಂಗಾಣದ ವಿದ್ಯುತ್ ಸರಬರಾಜು ಕಂಪನಿಯಾದ ಟ್ರಾನ್ಸ್ಕೋದಲ್ಲಿ ಲೈನ್ ವುಮೆನ್ ಹುದ್ದೆಯ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ.
ಇತ್ತೀಚೆಗೆ ಅಂದರೆ ಅಕ್ಟೋಬರ್ 13ರಂದು ನೇಮಕಾತಿ ಪತ್ರವನ್ನು ಹಸ್ತಾಂತರ ಮಾಡಲಾಗಿತ್ತು. ಇದಕ್ಕೂ ಮೊದಲು ಟ್ರಾನ್ಸ್ಕೋ ಕಂಪನಿಯಲ್ಲಿ ಮಹಿಳೆಯರನ್ನು ಲೈನ್ ವುಮೆನ್ಗಳನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ದ್ವಂದ್ವತೆ ಇದ್ದು, ಮಹಿಳೆಯರ ಮೂರು ವರ್ಷದ ಕಾನೂನು ಹೋರಾಟದ ಮೂಲಕ ಅದೆಲ್ಲಾ ಸಮಸ್ಯೆಗಳು ನಿವಾರಣೆಯಾಗಿವೆ.
ಇದುವರೆಗೆ ಟ್ರಾನ್ಸ್ಕೋ ಕಂಪನಿಯಲ್ಲಿ ಲೈನ್ ವುಮೆನ್ ಇಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದು, ತೆಲಂಗಾಣ ರಾಜ್ಯ ರಚನೆಯ ನಂತರ ನಾವು ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಜೂನಿಯರ್ ಲೈನ್ ವುಮೆನ್ ಹುದ್ದೆಯನ್ನು 2017 ಆರಂಭ ಮಾಡಲಾಗಿತ್ತು. ಆದರೂ ಟ್ರಾನ್ಸ್ಕೋ ಕಂಪನಿ ಈ ಹುದ್ದೆಗೆ ಮಹಿಳೆಯರ ನೇಮಕ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಇದ್ದ ಗೊಂದಲವನ್ನು ಈಗ ನಿವಾರಿಸಲಾಗಿದೆ. ಮೂರು ವರ್ಷದ ನಂತರ ಅವರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ.
ಪೋಲ್ ಭಾರತಿ ಮತ್ತು ಭುಕ್ಯಾ ಜ್ಯೋತಿ
ಜೂನಿಯರ್ ಲೈನ್ ವುಮನ್ ಹುದ್ದೆಗೆ ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆ ಪರೀಕ್ಷೆಗೆ ಕರೆದಾಗ ಮಹಬೂಬಾಬಾದ್ ಜಿಲ್ಲೆಯ ಸಣ್ಣ ಗ್ರಾಮವೊಂದರ ಕೃಷಿ ಕುಟುಂಬದಿಂದ ಬಂದ ಭಾರತಿ ಎಂಬಾಕೆ ವಿದ್ಯುತ್ ಕಂಬವನ್ನು ಸುಲಭವಾಗಿ ಏರಿದ್ದರು. ಪರೀಕ್ಷೆಯಲ್ಲಿ ಪಾಸಾಗಿದ್ದ ಕಾರಣ ಜನರು ಈಕೆಯನ್ನು ಪೋಲ್ ಭಾರತಿ ಎಂದೇ ಕರೆಯುತ್ತಿದ್ದಾರೆ ಎಂದ ಪತಿ ಮೋಹನ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2016ರಲ್ಲಿ ಐಟಿಐ ಪೂರ್ಣಗೊಳಿಸಿದ್ದ ಅವರು ಆರ್ಥಿಕ ದುಸ್ಥಿತಿಯ ಕಾರಣಕ್ಕೆ ಲೈನ್ ವುಮೆನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆ ತಯಾರಿ ನಡೆಸುವಾಗ ತನ್ನ ಪತಿಯೊಂದಿಗೆ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಈಗ ಲೈನ್ ವುಮೆನ್ ಆಗಿ ಆಯ್ಕೆಯಾಗಿದ್ದು, ಸಾಕಷ್ಟು ಜನರ ಮೆಚ್ಚುಗೆಗೆ ಕಾರಣವಾಗಿದೆ.
ಈ ಹುದ್ದೆಗೆ ಆಯ್ಕೆಯಾದ ಮತ್ತೊಬ್ಬ ಮಹಿಳೆ ಭುಕ್ಯಾ ಜ್ಯೋತಿ ಅವರು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡಬಾರದು. ಕಷ್ಟ ಎಂದುಕೊಂಡು ಹಿಂದೆ ಸರಿದರೆ, ಹಿಂದೆಯೇ ಉಳಿಯುತ್ತೀರಿ. ಧೈರ್ಯ ಮಾಡಿ ಮುಂದೆ ಹೆಜ್ಜೆ ಇಟ್ಟರೆ, ಯಶಸ್ಸು ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತೆಲಂಗಾಣ ಸಿಎಂ ಕೂಡಾ ಇವರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ:ಪೆಗಾಸಸ್ ಗೂಢಚಾರಿಕೆ ತನಿಖೆಗೆ ಸ್ವತಂತ್ರ ಸಮಿತಿ ನೇಮಿಸಿದ ಸುಪ್ರೀಂಕೋರ್ಟ್