ತಿರುಪತಿ (ಆಂಧ್ರ ಪ್ರದೇಶ): ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ತಿರುಚನೂರು ಶ್ರೀ ಪದ್ಮಾವತಿ ದೇವಿ ದೇವಸ್ಥಾನಗಳಿಗೆ ತೆಲಂಗಾಣದ ಭಕ್ತರೊಬ್ಬರು ಎರಡು ವಿಶಿಷ್ಟ ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಒಂದು ಸೀರೆಗೆ ಚಿನ್ನದ ಜರಿ (ಸೂಕ್ಷ್ಮ ದಾರ) ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಕೆ ಎಸ್ ಜವಾಹರ್ ರೆಡ್ಡಿ ಅವರ ಮೂಲಕ ಈ ಸೀರೆಗಳನ್ನು ನಲ್ಲ ವಿಜಯ್ ಎಂಬುವರು ಪ್ರಸ್ತುತಪಡಿಸಿದ್ದಾರೆ. ಭಕ್ತರೊಬ್ಬರು ತಿರುಪತಿಯ ಶ್ರೀ ಪದ್ಮಾವತಿ ರೆಸ್ಟ್ ಹೌಸ್‌ನಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ವಿಶೇಷವಾದ ಸೀರೆಗಳನ್ನು ಅರ್ಪಿಸಿದರು. ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಿದ ಸೀರೆಯ ಬೆಲೆ ಸುಮಾರು 45,000 ರೂಪಾಯಿ ಮತ್ತು ಅಮ್ಮನವರಿಗೆ ದಾನ ಮಾಡಿದ ಸೀರೆಯ ನೇಯ್ಗೆಯಲ್ಲಿ 5 ಗ್ರಾಂ ಚಿನ್ನದ ಜರಿ ಇದೆ ಎಂದು ಅಧಿಕಾರಿಗಳು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿರುಪತಿ ದೇವಸ್ಥಾನದ ಆಡಳಿತ ನಡೆಸುತ್ತಿರುವ ಟಿಟಿಡಿ ಭಾನುವಾರ ಸಂಜೆ ವೊಂಟಿಮಿಟ್ಟ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ವಾರ್ಷಿಕ ಪುಷ್ಪಯಾಗವನ್ನು ನಡೆಸಿತು. ಸೀತಾ, ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ಸ್ವಾಮಿ ದೇವರಿಗೆ ವಿಧದ ಪರಿಮಳಯುಕ್ತ ಎಲೆಗಳು ಸೇರಿದಂತೆ 11 ಪ್ರಭೇದಗಳನ್ನು ಒಳಗೊಂಡ ಸುಮಾರು 2.5 ಟನ್ ಹೂವುಗಳನ್ನು ಅರ್ಪಿಸಲಾಯಿತು.
ಇದನ್ನೂ ಓದಿ :ಶ್ರೀನಿವಾಸ ಕಲ್ಯಾಣೋತ್ಸವ ಭಕ್ತಿಯಲ್ಲಿ ಮಿಂದೆದ್ದ ಜನಸಾಗರ
ಇನ್ನೊಂದೆಡೆ, ತಿರುಪತಿಯ ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ಹಾಗೂ ಎಸ್.ವಿ.ಗೋ ಶಾಲಾ ಫೀಡ್ ಮಿಕ್ಸಿಂಗ್ ಪ್ಲಾಂಟ್ ಹಾಗೂ ಎರಡನೇ ಅಗರಬತ್ತಿ ಘಟಕದ ಕಾಮಗಾರಿ ಸ್ಥಳವನ್ನು ಕೆ ಎಸ್ ಜವಾಹರ್ ರೆಡ್ಡಿ ಪರಿಶೀಲಿಸಿದರು. ಹಾಗೆಯೇ, ಡಿಸೆಂಬರ್ ಒಳಗೆ ಮಕ್ಕಳ ಆಸ್ಪತ್ರೆಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಅವರು ಟಿಟಿಡಿ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಮಾತನಾಡಿದ ಆಂಧ್ರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೊಸ ಫೀಡ್ ಮಿಕ್ಸಿಂಗ್ ಪ್ಲಾಂಟ್ ಸಹಕಾರದೊಂದಿಗೆ ಟಿಟಿಡಿ ಜಾನುವಾರುಗಳು ತಮ್ಮ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಉತ್ತಮ ಮೇವನ್ನು ಪಡೆಯಲಿವೆ. ಹೆಚ್ಚುತ್ತಿರುವ ಸಾರ್ವಜನಿಕ ಬೇಡಿಕೆಯನ್ನು ಪೂರೈಸಲು ಎರಡನೇ ಅಗರಬತ್ತಿ ಘಟಕವು ಸಹಾಯ ಮಾಡಲಿದೆ ಎಂದರು. ಬಳಿಕ, ಶ್ರೀನಾಥ್ ರೆಡ್ಡಿ ನೇತೃತ್ವದ ವೈದ್ಯರ ತಂಡವು ಮಕ್ಕಳ ಆಸ್ಪತ್ರೆಯಲ್ಲಿ 1,300 ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದು, ಎರಡು ಹೃದಯ ಕಸಿ ಮಾಡಿದೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ :ತಿರುಪತಿ ದೇವಸ್ಥಾನಕ್ಕೆ 42 ಲಕ್ಷ ವೆಚ್ಚದ ಧರ್ಮರಥ ನೀಡಿದ ಸುಧಾಮೂರ್ತಿ: ಫೋಟೋಗಳಲ್ಲಿ ಒಮ್ಮೆ ನೋಡಿ
ಇನ್ನು ಕಳೆದ ವರ್ಷ ಸಮಾಜಮುಖಿ ಕಾರ್ಯಗಳಿಂದ ಜನರ ಮೆಚ್ಚುಗೆ ಪಾತ್ರರಾಗುವ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸುಮಾರು 42 ಲಕ್ಷ ರೂಪಾಯಿ ವೆಚ್ಚದ ಧರ್ಮ ರಥ ವಾಹನವನ್ನು ಕೊಡುಗೆಯಾಗಿ ನೀಡಿದ್ದರು. ಈ ಧರ್ಮ ರಥವು ತಿರುಪತಿಯ ಸುತ್ತಮುತ್ತಲಿನ ಹಳ್ಳಿ ಪ್ರದೇಶಗಳಿಗೆ ತೆರಳುವ ಮೂಲಕ ಭಕ್ತರಿಗೆ ಶ್ರೀನಿವಾಸನ ದರ್ಶನ ಮಾಡಿಸುತ್ತಿದೆ.