ಚೆನ್ನೈ (ತಮಿಳುನಾಡು):ಬೆಳಗಿನ ಉಪಹಾರ ಯೋಜನೆಯಡಿ ನೀಡಲಾಗುವ ಆಹಾರವನ್ನು ದಲಿತ ಮಹಿಳೆಯೊಬ್ಬರು ತಯಾರಿಸಿದ್ದಾರೆ ಎಂಬ ಕ್ಷುಲ್ಲಕ ಕಾರಣದಿಂದ ಕೆಲವು ಶಾಲಾ ವಿದ್ಯಾರ್ಥಿಗಳು ಬೆಳಗಿನ ಉಪಹಾರವನ್ನೇ ತಿನ್ನಲು ನಿರಾಕರಿಸಿದ ಘಟನೆ ಇಲ್ಲಿನ ಕರೂರ್ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ.
ದಲಿತ ಮಹಿಳೆಯೊಬ್ಬರು ಅಡುಗೆ ಮಾಡಿದ್ದಾರೆ. ಹಾಗಾಗಿ ನಾವು ಆ ಉಪಹಾರ ಸೇವಿಸುವುದಿಲ್ಲ ಎಂದು ಶಾಲೆಯ 15 ವಿದ್ಯಾರ್ಥಿಗಳು ಉಚಿತ ಉಪಹಾರ ಯೋಜನೆಯ ಈ ಪ್ರಯೋಜನ ಪಡೆಯಲು ನಿರಾಕರಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಆ ಶಾಲೆಗೆ ಜಿಲ್ಲಾಧಿಕಾರಿ ಟಿ ಪ್ರಭು ಶಂಕರ್ ಎಂಬುವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿನ ವಿಷಯ ಅರಿತಿದ್ದಲ್ಲದೇ ಆಯಾ ವಿದ್ಯಾರ್ಥಿಗಳ ಪೋಷಕರಿಗೆ ಮನವರಿಕೆ ಮಾಡಿದ ಜಿಲ್ಲಾಧಿಕಾರಿಗಳು, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಂಭಾವ್ಯ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಿದರು. ಮಂಗಳವಾರ ಬೆಳಗಿನ ಉಪಹಾರ ಯೋಜನೆ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳು ಈ ವಿದ್ಯಾರ್ಥಿಗಳ ಪೋಷಕರನ್ನು ಭೇಟಿ ಮಾಡಿದರು.
ಈ ವಿಷಯದ ಬಗ್ಗೆ ಪೋಷಕರನ್ನು ಪ್ರಶ್ನಿಸಿದಾಗ, ದಲಿತರಾದ ಸುಮತಿ ಅವರು ಬೆಳಗಿನ ಉಪಹಾರ ಆಹಾರವನ್ನು ತಯಾರಿಸುತ್ತಿದ್ದಾರೆ. ಅವರು ಅಡುಗೆಯನ್ನು ಮಾಡುವವರೆಗೂ ತಮ್ಮ ಮಗು ಆಹಾರವನ್ನು ಸೇವಿಸುವುದಿಲ್ಲ ಎಂದು ಪೋಷಕರು ಕಡ್ಡಿ ಮುರಿದಂತೆ ಹೇಳಿದರು. ಅಲ್ಲದೇ ಒಂದು ವೇಳೆ ಶಾಲಾ ಆಡಳಿತ ಮಂಡಳಿಯು ತಿನ್ನಲು ಒತ್ತಾಯಿಸಿದರೆ, ತಮ್ಮ ಮಕ್ಕಳನ್ನು ಶಾಲೆಯಿಂದ ಹೊರಗೆ ಕರೆದೊಯ್ಯಲು ಸಿದ್ಧರಿದ್ದೇವೆ ಎಂದು ಸಹ ಪೋಷಕರು ಜಿಲ್ಲಾಧಿಕಾರಿ ಬಳಿ ಹೇಳಿದ್ದಾರೆ.