ಚೆನ್ನೈ(ತಮಿಳುನಾಡು):ಇಡೀಜಗತ್ತು ಆಧುನಿಕತೆಯತ್ತ ದಾಪುಗಾಲು ಹಾಕ್ತಿದೆ. ಪರಿಸ್ಥಿತಿ ಹೀಗಿದ್ದರೂ ಭಾರತದ ಕೆಲವು ರಾಜ್ಯಗಳಲ್ಲಿ ಈಗಲೂ ಸಾವಿರಾರು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ತಮಿಳುನಾಡಿನಲ್ಲಿ ಕಣಿ ಎಂಬ ಬುಡಕಟ್ಟು ಜನಾಂಗದ ಹುಡುಗಿಯೋರ್ವಳು ತನ್ನ ಹಳ್ಳಿಯಿಂದ ಕಾಲೇಜ್ ಸೇರಿದ ಮೊದಲ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾಳೆ.
18 ವರ್ಷದ ಅಭಿನಯ ಅಯ್ಯಪ್ಪನ್ ತಿರುನೆಲ್ವೆಲಿಯ ಇಂಜಿಕುಝಿ ಗ್ರಾಮದಲ್ಲಿ ವಾಸವಾಗಿದ್ದಾಳೆ. ಇಂಜಿಕುಝಿ ಪಾಪನಾಸಂ-ಕರೈಯಾರ್ ಅಣೆಕಟ್ಟಿನಿಂದ ಸುಮಾರು 10 ಕಿಮೀ ದೂರದಲ್ಲಿ ದಟ್ಟ ಅರಣ್ಯದೊಳಗೆ ಇವರ ಸಣ್ಣ ಗ್ರಾಮವಿದೆ. ಈ ಊರಿನಲ್ಲಿ ಕಣಿ ಬುಡಕಟ್ಟಿನ 8 ಕುಟುಂಬಗಳಿವೆ. ಇಲ್ಲಿ ವಾಸವಾಗಿರುವ ಅಯ್ಯಪ್ಪನ್ ಮತ್ತು ಮಲ್ಲಿಕಾ ದಂಪತಿಯ ಪುತ್ರಿಯೇ ಈ ಅಭಿನಯ.
ಗ್ರಾಮದಲ್ಲಿ ಇಂಟರ್ನೆಟ್, ದೂರವಾಣಿ ಯಾವುದೇ ಸಂಪರ್ಕಗಳಿಲ್ಲ. ಆದರೆ, ಪದವೀಧರೆಯಾಗಬೇಕೆಂದು ಈ ಹುಡುಗಿ ಹಾತೊರೆಯುತ್ತಿದ್ದಾಳೆ. 1 ರಿಂದ 12 ನೇ ತರಗತಿಯವರೆಗೆ ತಿರುನೆಲ್ವೇಲಿ ನಗರದ ಹಾಸ್ಟೆಲ್‌ನಲ್ಲಿ ಓದಿರುವ ಈಕೆ ಕಳೆದ ವರ್ಷ ರಾಜ್ಯ ಸರ್ಕಾರದ ಕಾನೂನು ಪದವಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ, ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಹೀಗಾಗಿ, ನಗರದಲ್ಲಿ ಉಳಿದುಕೊಳ್ಳಲು ಹಣವಿಲ್ಲದ ಕಾರಣ ತನ್ನ ಬುಡಕಟ್ಟು ಗ್ರಾಮಕ್ಕೆ ಮರಳಿದ್ದಳು. ಈ ವರ್ಷ ಕಾಲೇಜ್ಗೆ ಸೇರುವ ಉದ್ದೇಶದಿಂದ ಕಲಾ ಮತ್ತು ವಿಜ್ಞಾನ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ತಾನು ಅರ್ಜಿ ಸಲ್ಲಿಸಿರುವ ಕಾಲೇಜ್ನಿಂದ ಮಗಳಿಗೆ ಕರೆ ಬರುತ್ತದೆಂದು ತಂದೆ ಪ್ರತಿದಿನ ಪಕ್ಕದ ಹಳ್ಳಿಗೆ ಹೋಗಿ ಫೋನ್ ಕರೆಗೋಸ್ಕರ ಕಾಯುತ್ತಿದ್ದರು. ಈ ಕಾಯುವಿಕೆಯ ಫಲವಾಗಿ ಕೊನೆಗೂ ಅಭಿನಯಗೆ ಸರ್ಕಾರಿ ಕಲಾ ಕಾಲೇಜ್ನಿಂದ ಕರೆ ಬಂದಿದ್ದು, ಬಿ.ಎ ಓದಲು ಅನುಮತಿ ಸಿಕ್ಕಿದೆ. ಇದರಿಂದ ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡಿರುವ ಅಭಿನಯ, "ನಮ್ಮ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ತಂದೆ ಬಾಳೆಹಣ್ಣು, ಗೆಡ್ಡೆ, ಮೆಣಸು ಮತ್ತು ಜೇನುತುಪ್ಪದಂತಹ ವಸ್ತುಗಳನ್ನ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಇದೀಗ ಪದವಿ ವ್ಯಾಸಂಗ ಮಾಡಲು ಅವಕಾಶ ಸಿಕ್ಕಿದೆ. ಚೆನ್ನಾಗಿ ಓದಿ, ತಂದೆಯ ಹೆಸರು ಬೆಳಗಿಸುತ್ತೇನೆ" ಎಂದಳು.