ಆಗ್ರಾ (ಉತ್ತರ ಪ್ರದೇಶ): ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ತಾಜ್ಮಹಲ್(Taj Mahal) ಶನಿವಾರ ರಾತ್ರಿಯಿಂದ ವೀಕ್ಷಣೆಗೆ ಮುಕ್ತವಾಗಿದೆ. ಕೊರೊನಾ ಹಾಗೂ ಲಾಕ್ಡೌನ್ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ತಾಜ್ಮಹಲ್ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ಕೋವಿಡ್ ನಿಯಮ ಸಡಿಲಿಕೆಯಾದ ಹಿನ್ನೆಲೆ ಪ್ರವಾಸಿಗರಿಗೆ ರಾತ್ರಿ ವೇಳೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಈ ಕುರಿತು ಸಂತಸ ಹಂಚಿಕೊಂಡಿರುವ ಪ್ರವಾಸಿ ಮನೋಜ್ ಎನ್ನುವರು, ರಾತ್ರಿಯ ಹೊತ್ತು ತಾಜ್ಮಹಲ್ ಬಹಳ ಸುಂದರವಾಗಿ ಕಾಣುತ್ತದೆ. ಚಂದ್ರನ ಬೆಳಕಿನಲ್ಲಿ ತಾಜ್ಮಹಲ್ ನೋಡುವುದು ಅದ್ಭುತ ಎಂದಿದ್ದಾರೆ.
ಇತ್ತ ತಾಜ್ಮಹಲ್ ವೀಕ್ಷಣೆಗೆ ಹಲವು ಮುಂಜಾಗ್ರತಾ ಕ್ರಮ ಜರುಗಿಸಲಾಗಿದೆ. ವಾರದಲ್ಲಿ ಕೇವಲ 3 ದಿನ ಮಾತ್ರ ತೆರೆದಿರಲಿದ್ದು, ಇನ್ನುಳಿದ ದಿನ ಮುಚ್ಚಿರಲಿದೆ. ಈ ವೇಳೆ ಸ್ಯಾನಿಟೈಸ್ ಹಾಗೂ ಮೇಲ್ವಿಚಾರಣೆ ನಡೆಯಲಿದೆ. ಜೊತೆಗೆ ದಿನವೊಂದಕ್ಕೆ ಕೇವಲ 150 ಪ್ರವಾಸಿಗರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಇದೂ ಸಹ 50 ಜನರಂತೆ ಮೂರು ಬ್ಯಾಚ್ಗಳ ಮೂಲಕ ಪ್ರವೇಶ ನೀಡಲಾಗುವುದು, ರಾತ್ರಿ 8:30ರಿಂದ 10 ಗಂಟೆಯವರೆಗೆ ಮಾತ್ರ ವೀಕ್ಷಣೆಗೆ ಸಮಯ ನಿಗದಿ ಮಾಡಲಾಗಿದೆ.
ಹಾಗೆಯೇ ತಾಜ್ಮಹಲ್ ವೀಕ್ಷಣೆಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜೊತೆಗೆ ಅಂತರ ಕಾಯ್ದುಕೊಳ್ಳಬೇಕಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಓದಿ:ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನೋಡುವುದು ನನ್ನ ಕನಸು ಎಂದಿದ್ದ ಕಲ್ಯಾಣ್ ಸಿಂಗ್