ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರು ಹಣ ದೋಚಲು ಹಲವು ದಾರಿಗಳನ್ನು ಕಂಡುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಆಕರ್ಷಕ ಮೆಸೇಜ್ಗಳಿಂದ ನಿಮ್ಮನ್ನು ಬುಟ್ಟಿಗೆ ಹಾಕಿಕೊಳ್ಳುವ ಚಾಲಾಕಿ ಟ್ರಿಕ್ಸ್ಗಳನ್ನು ಬಳಸುತ್ತಿದ್ದಾರೆ. ಆ ಜಾಲದಲ್ಲಿ ಬಿದ್ದು ಬಲಿಯಾದವರೂ ಇದ್ದಾರೆ. ಶೃಂಗಾರಮಯ ಮಾತುಗಳಿಗೆ ಮರುಳಾಗಿ ಬ್ಯಾಂಕ್ ಖಾತೆಗೆ ಕತ್ತರಿ ಹಾಕಿಸಿಕೊಂಡವರೂ ಸಹ ಇದ್ದಾರೆ.
ಸುಂದರವಾದ ಸಂಜೆ ಆ ಸಂಜೆಯಲ್ಲಿ ಅಪರಿಮಿತ ಆನಂದವನ್ನು ಆಸ್ವಾಧಿಸಲು ನೀವು ಸಿದ್ಧರಿದ್ದೀರಾ? ಹಾಗಾದರೆ ನಮ್ಮೊಂದಿಗೆ ಮಾತನಾಡಿ ಅಪರಿಮಿತ ಸಂತೋಷ ನಿಮ್ಮದಾಗುತ್ತದೆ? ನಿಮ್ಮ ದುಃಖವನ್ನು ಹಂಚಿಕೊಂಡು ಸಂತೋಷವನ್ನು ಹೆಚ್ಚಿಸಿಕೊಳ್ಳಿ ಇಂತಹ ಮೆಸೇಜ್ಗಳು ನಿಮ್ಮ ಮೊಬೈಲ್ಗೆ ಬರುತ್ತಿವೆಯಾ? ಹಾಗಾದರೆ ಖಂಡಿತವಾಗಿಯೂ ಆಮೆಸೇಜ್ಗಳಿಗೆ ಉತ್ತರಿಸುವ ಮುನ್ನ ಜಾಗರೂಕರಾಗಿರಿ! ಅಂತಹ ಯಾವುದೇ ಮೆಸೇಜ್ಗಳಿಗೆ ಎಂದಿಗೂ ಉತ್ತರಿಸಲು ಹೋಗಬೇಡಿ.
ಒಂದು ವೇಳೆ ನೀವು ಅಂತಹ ಮೆಸೇಜ್ಗಳಿಗೆ ಪ್ರತಿಕ್ರಿಯಿಸಿದಿರಿ ಎಂದಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಕನ್ನ ಗ್ಯಾರಂಟಿ. ಕೋಲ್ಕತ್ತಾ ಮೂಲದ ಸೈಬರ್ ಅಪರಾಧಿಗಳು ಹಣ ಲೂಟಿ ಮಾಡಲು ಯುವಕರ ಮೇಲೆ ಇಂತಹ ಅಸ್ತ್ರಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಈ ರೀತಿಯ ಸಂದೇಶವನ್ನು ಕಳುಹಿಸಿದ ಜನರೊಂದಿಗೆ ಮಾತನಾಡಿದ ಕೆಲವರು ತಮ್ಮ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾರೆ. ಈಗ ಸಹಾಯಕ್ಕಾಗಿ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಸೈಬರ್ ಕಳ್ಳರ ಸಿಹಿಯಾದ ಮಾತುಗಳಿಗೆ ಹೆಚ್ಚಿನ ಯುವಕರು ಬಲಿಯಾಗಿದ್ದಾರೆ. ತಮ್ಮ ಮಾತುಗಳಿಗೆ ಯುವಕರು ಮರುಳಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ವಂಚಕರು ಅವರನ್ನು ಡಿನ್ನರ್ ಡೇಟ್ಗೆ ಆಹ್ವಾನಿಸುತ್ತಾರೆ. ಅದಕ್ಕೆ ಆ ವ್ಯಕ್ತಿ ಒಪ್ಪಿಗೆ ಕೊಟ್ಟ ಕೂಡಲೇ ಅವರಿಂದ ಸದಸ್ಯತ್ವಕ್ಕಾಗಿ 10,000 ಪಾವತಿ ಮಾಡಲು ಹೇಳುತ್ತಾರೆ. ಸೈಬರ್ ಕಳ್ಳರು ವಿಡಿಯೋ ಕರೆ ಮಾಡಿ ನಯವಾಗಿ ಮಾತನಾಡಿ, ಇನ್ನಾವುದಾದರೂ ರೆಸಾರ್ಟ್ ಅಥವಾ ಬೇರೆ ಯಾವುದಾದರೂ ಸುಂದರವಾದ ಸ್ಥಳಕ್ಕೆ ಹೋಗೋಣ ಎಂದು ಹೇಳಿ ಮತ್ತೆ ಹೆಚ್ಚಿನ ಹಣ ನೀಡುವಂತೆ ಕೇಳುತ್ತಾರೆ. ಆ ಮಾತುಗಳಿಗೆ ಮರುಳಾಗಿ ಹಣ ಪಾವತಿಸಿದ ತಕ್ಷಣದಿಂದಲೇ ಖದೀಮರು ಕರೆ ಮಾಡುವುದನ್ನೇ ನಿಲ್ಲಿಸಿ ಬಿಡುತ್ತಾರೆ.