ವಾರಾಣಸಿ(ಉತ್ತರಪ್ರದೇಶ):ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ನಿಧನದ ಬಳಿಕ ಸೋಮವಾರ ನೂತನ ಶಂಕರಾಚಾರ್ಯರನ್ನು ಘೋಷಿಸಲಾಯಿತು. ವಾರಾಣಸಿಯ ಶ್ರೀ ವಿದ್ಯಾ ಮಠ ಮತ್ತು ಜ್ಯೋತಿಷಪೀಠ ಬದರಿನಾಥದ ಜವಾಬ್ದಾರಿ ಹೊತ್ತಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸಲಾಯಿತು. ಸ್ವಾಮಿ ಸದಾನಂದರನ್ನು ದ್ವಾರಕಾ ಜ್ಯೋತಿಷ ಪೀಠದ ಮುಖ್ಯಸ್ಥರನ್ನಾಗಿ ಮಾಡಲಾಗಿದೆ.
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಶಂಕರಾಚಾರ್ಯರು ಕಾಶಿಯಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿಯ ಆದೇಶದ ಮೇರೆಗೆ ದೊಡ್ಡ ಚಳವಳಿಯ ರೂಪುರೇಷೆಗಳನ್ನು ರಚಿಸಿದ್ದರು. ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಹತ್ತಿರದ ಶಿಷ್ಯ ಎಂದು ಪರಿಗಣಿಸಲಾಗಿದೆ. ಶ್ರೀ ವಿದ್ಯಾ ಮಠದ ಜವಾಬ್ದಾರಿಯನ್ನು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ನಿರ್ವಹಿಸಲಿದ್ದಾರೆ. ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ವಾರಾಣಸಿಯಲ್ಲಿ ಶ್ರೀ ವಿದ್ಯಾ ಮಠ ಎಂಬ ದೊಡ್ಡ ಆಶ್ರಮವನ್ನು ಹೊಂದಿದ್ದಾರೆ.
ಗಂಗಾನದಿಯ ದಂಡೆಯ ಹರಿಶ್ಚಂದ್ರ ಘಾಟ್ ಪಕ್ಕದಲ್ಲಿರುವ ಈ ಆಶ್ರಮದ ಜವಾಬ್ದಾರಿಯನ್ನು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ನೀಡಲಾಗಿದೆ. ಇದಲ್ಲದೇ ಶಂಕರಾಚಾರ್ಯರ ಪರವಾಗಿ ಸ್ವಾಮಿ ಅವಿಮುಕ್ತೇಶ್ವರಾನಂದರು ಆಗಲೇ ಜ್ಯೋತಿರ್ಮಠ ಬದರಿನಾಥರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಸೋಮವಾರ ಶಂಕರಾಚಾರ್ಯರ ಪ್ರತಿನಿಧಿಯಾಗಿ ಸ್ವಾಮಿ ಅವಿಮುಕ್ತೇಶ್ವರಾನಂದರ ಹೆಸರು ಘೋಷಣೆಯಾದ ಬೆನ್ನಲ್ಲೇ ಕಾಶಿಗೆ ಇಂಥದ್ದೊಂದು ಹೆಮ್ಮೆ ಸಿಕ್ಕಿದ ಖುಷಿಯೂ ವ್ಯಕ್ತವಾಗುತ್ತಿದೆ.
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಯಾರು?:ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ವಾಸಿಸುತ್ತಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯ ಹಳೆಯ ಹೆಸರು ಉಮಾಕಾಂತ್ ಪಾಂಡೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು, ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ಚಿಕ್ಕ ವಯಸ್ಸಿನಲ್ಲೇ ನಿವೃತ್ತಿ ಪಡೆದರು.
ಬಳಿಕ ಅವರು ವಾರಾಣಸಿಯ ಶ್ರೀ ವಿದ್ಯಾ ಮಠಕ್ಕೆ ಬಂದು, ಬ್ರಹ್ಮಚಾರಿ ಶಿಕ್ಷಣವನ್ನು ಪಡೆದರು. ಇಲ್ಲಿ ಅವರನ್ನು ಬ್ರಹ್ಮಚಾರಿ ಆನಂದ್ ಸ್ವರೂಪ್ ಎಂದು ಹೆಸರಿಸಲಾಯಿತು. ಆದರೆ, ನಂತರ ಅವರು ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರಿಂದ ಶಿಕ್ಷಣ ಪಡೆದರು ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಎಂದು ಹೆಸರು ಪಡೆದರು.
ಗಂಗಾ ಸೇವಾ ಅಭಿಯಾನ: ಸ್ವರೂಪಾನಂದರಿಂದ ಶಿಕ್ಷಣ ಪಡೆದ ನಂತರ, ಅವರ ಹತ್ತಿರದ ಶಿಷ್ಯರಲ್ಲಿ ಒಬ್ಬರಾದರು. 2008 ರಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಗಂಗಾ ಸೇವಾ ಅಭಿಯಾನವನ್ನು ಘೋಷಿಸಿದಾಗ, ವಾರಾಣಸಿಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಈ ಚಳವಳಿಯ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿದ್ದರು.