ಛಪ್ರಾ (ಬಿಹಾರ): ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವಿನ ಸರಣಿ ಮುಂದುವರೆದಿದೆ. ಸರನ್ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ ಅಸ್ವಸ್ಥಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ. ಅಲ್ಲದೇ, ಇನ್ನೂ ಮೂವರು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿನ ಶಹನೆವಾಜ್‌ಪುರ ಗ್ರಾಮದ ನಿವಾಸಿಗಳಾದ ಮನೋಜ್ ಸಾಹ್ ಮತ್ತು ಇವರ ಸೋದರಳಿಯ ಸುನಿಲ್ ಕುಮಾರ್ ಎಂಬುವವರೇ ಮೃತರೆಂದು ಗುರುತಿಸಲಾಗಿದೆ. ಜನವರಿ 1ರಂದು ನಡೆದ ಪಾರ್ಟಿಯಲ್ಲಿ ಸ್ನೇಹಿತರೊಂದಿಗೆ ಸೇರಿಕೊಂಡು ಮನೋಜ್ ಮತ್ತು ಸುನಿಲ್ ಮದ್ಯ ಸೇವಿಸಿದ್ದರು. ಇದರ ನಂತರ ಇಬ್ಬರ ಆರೋಗ್ಯವೂ ಹದಗೆಟ್ಟಿತ್ತು ಎಂದು ಹೇಳಲಾಗುತ್ತಿದೆ.
ಮಂದ ದೃಷ್ಟಿ, ಹೊಟ್ಟೆ ನೋವು: ಹೊಸ ವರ್ಷಾಚರಣೆ ದಿನದ ರಾತ್ರಿಯೇ ಈ ಪಾರ್ಟಿ ನಡೆದಿತ್ತು. ಮರು ದಿನ ಎಂದರೆ ಸೋಮವಾರ ಬೆಳಗ್ಗೆ ಏಕಾಏಕಿ ಮನೋಜ್ ಮತ್ತು ಸುನಿಲ್ ಇಬ್ಬರ ಆರೋಗ್ಯವೂ ಹದಗೆಡಲಾರಂಭಿಸಿತು. ಇಬ್ಬರಿಗೂ ಮಂದ ದೃಷ್ಟಿ ಮತ್ತು ಹೊಟ್ಟೆ ನೋವಿನ ಸಮಸ್ಯೆ ಕಾಡಲು ಶುರುವಾಯಿತು. ಆದ್ದರಿಂದ ಸಂಬಂಧಿಕರು ಇಬ್ಬರನ್ನೂ ಛಪ್ರಾ ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ:ಮದ್ಯ ಸೇವಿಸುವವರು ಖಂಡಿತಾ ಸಾಯ್ತಾರೆ ಎಂದ ನಿತೀಶ್ ಕುಮಾರ್
ಆದರೆ, ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿಯೇ ಸುನೀಲ್ ಕುಮಾರ್ ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಮನೋಜ್ ಸಾಹ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಛಪ್ರಾದಿಂದ ರಾಜಧಾನಿ ಪಾಟ್ನಾದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಬುಧವಾರ ಮನೋಜ್ ಸಾಹ್ ಕೂಡ ಚಿಕಿತ್ಸೆ ಪಡೆಯುವಾಗಲೇ ಕೊನೆಯುಸಿರೆಳೆದಿದ್ದಾರೆ. ಪಾಟ್ನಾದಿಂದ ಮನೋಜ್ ಮೃತದೇಹ ಗ್ರಾಮಕ್ಕೆ ತಲುಪುತ್ತಿದ್ದಂತೆಯೇ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೂವರ ಸ್ಥಿತಿ ಚಿಂತಾಜನಕ: ಎರಡೇ ದಿನಗಳ ಅಂತರದಲ್ಲಿ ಮನೋಜ್ ಮತ್ತು ಸುನಿಲ್ ಮೃತಪಟ್ಟಿರುವುದರಿಂದ ಇಡೀ ಶಹನೆವಾಜ್‌ಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇದರ ನಡುವೆಯೇ ಇನ್ನೂ ಮೂವರು ಕೂಡ ನಕಲಿ ಮದ್ಯ ಸೇವನೆಯಿಂದ ಆಸ್ಪತ್ರೆ ಸೇರಿದ್ದಾರೆ. ಈ ಮೂವರ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ. ಇವರೆಲ್ಲರೂ ಒಂದೇ ಗ್ರಾಮದವರಾಗಿದ್ದು, ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ.
ನಕಲಿ ಮದ್ಯದಿಂದ ಸರಣಿ ಸಾವುಗಳು:ಬಿಹಾರದಲ್ಲಿ ಮದ್ಯ ಸೇವನೆ ಮತ್ತು ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೂ, ಮದ್ಯದ ಹಾವಳಿ ಮಾತ್ರ ನಿಂತಿಲ್ಲ. ಸರನ್, ಛಪ್ರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವ್ಯಾಹತವಾಗಿ ಮದ್ಯ ಮಾರಾಟವಾಗುತ್ತಿದೆ. ಅದರಲ್ಲೂ, ನಕಲಿ ಮದ್ಯ ದಂಧೆ ಜೋರಾಗಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಮದ್ಯ ಸೇವಿಸಿ ಸರಣಿ ಸಾವುಗಳು ಸಂಭವಿಸುತ್ತಿದ್ದು, ಇದುವರೆಗೆ ಅಂದಾಜು 80 ಜನರು ನಕಲಿ ಮದ್ಯ ಸೇವನೆಯಿಂದ ಬಲಿಯಾಗಿದ್ದಾರೆ. ಇದು ದೇಶಾದ್ಯಂತ ಸಂಚಲನ ಉಂಟು ಮಾಡಿದ್ದು, ಮದ್ಯ ನಿಷೇಧ ಕಾಯ್ದೆಯ ಜಾರಿ ಬಗ್ಗೆಯೇ ಚರ್ಚೆಯನ್ನೂ ಹುಟ್ಟುಹಾಕುವಂತೆ ಮಾಡಿದೆ. ಇತ್ತ, ಪೊಲೀಸರು ಸಹ ನಕಲಿ ಮದ್ಯಕ್ಕೆ ಕಡಿವಾಣ ಹಾಕಲು ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ:ಬೆಳಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ರಾತ್ರಿ ಮನೆ ಮನೆಗೆ ಕಳ್ಳಭಟ್ಟಿ ಡೆಲಿವರಿ ಮಾಡುತ್ತಿದ್ದ ಯುವಕನ ಬಂಧನ
ಇಲ್ಲಿಯವರೆಗೆ 200ಕ್ಕೂ ಹೆಚ್ಚು ಜನ ಆರೋಪಿಗಳನ್ನೂ ಬಂಧಿಸಲಾಗಿದೆ. ಇತ್ತೀಚೆಗೆ ವಿಷಪೂರಿತ ಮದ್ಯದ ಮಾಸ್ಟರ್ ಮೈಂಡ್ ಎನ್ನಲಾದ ರಾಮ್ ಬಾಬು ಎಂಬಾತನನ್ನು ಸೆರೆ ಹಿಡಿದಿದ್ದಾರೆ. ಆದರೂ, ನಕಲಿ ಮದ್ಯದ ದುರಂತ ನಡೆಯುತ್ತಲೇ ಇದೆ. ಮತ್ತೊಂದೆಡೆ, ನಕಲಿ ಮದ್ಯ ಸೇವಿಸಿ ಮೃತಪಟ್ಟವರಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆಯಲ್ಲೇ ಘೋಷಿಸಿದ್ದಾರೆ.
ಇದನ್ನೂ ಓದಿ:ಬೆಳಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ರಾತ್ರಿ ಮನೆ ಮನೆಗೆ ಕಳ್ಳಭಟ್ಟಿ ಡೆಲಿವರಿ ಮಾಡುತ್ತಿದ್ದ ಯುವಕನ ಬಂಧನ