ಸೂರತ್(ಗುಜರಾತ್):ಮಹಾರಾಷ್ಟ್ರದಲ್ಲಿ ಇಂದು ದಿಢೀರ್ ರಾಜಕೀಯ ಕಂಪನ ಸೃಷ್ಟಿಯಾಗಿದ್ದರೂ ಅದರ ಕೇಂದ್ರಬಿಂದು ಮಾತ್ರ ಗುಜರಾತ್ನಲ್ಲಿದೆ. ತಮ್ಮ ಆಡಳಿತಾರೂಢ ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದು ಬಂದಿರುವ ಶಿವಸೇನೆ ಸಚಿವರು, ಶಾಸಕರಿಗೆ ಇಲ್ಲಿನ ಬಿಜೆಪಿ ಸರ್ಕಾರ ಆತಿಥ್ಯ ನೀಡಿದೆ. ಅಲ್ಲದೇ, ಶಿವಸೈನಿಕರು ತಂಗಿರುವ ಐಷಾರಾಮಿ ಹೋಟೆಲ್ ಅನ್ನೇ ಭದ್ರಕೋಟೆಯನ್ನಾಗಿ ಪರಿವರ್ತಿಸಿ, ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ಶಿವಸೇನೆಯ ಭಿನ್ನಮತೀಯ ಸಚಿವ ಏಕನಾಥ ಶಿಂಧೆ ಸುಮಾರು 21 ಶಾಸಕರೊಂದಿಗೆ ಮುಂಬೈನಿಂದ 280 ಕಿ.ಮೀ. ದೂರದಲ್ಲಿರುವ ಸೂರತ್ನ ಮೆರಿಡಿಯನ್ ಹೊಟೇಲ್ನಲ್ಲಿ ತಂಗಿದ್ಧಾರೆ. ಹೀಗಾಗಿ ಮಹಾರಾಷ್ಟ್ರ ಮಾತ್ರವಲ್ಲದೇ ಸದ್ಯ ಇಡೀ ರಾಷ್ಟ್ರದ ರಾಜಕಾರಣದ ಗಮನ ಈ ಹೋಟೆಲ್ನತ್ತ ಹರಿದಿದೆ. ಮಂಗಳವಾರ ಬೆಳಗ್ಗೆಯಿಂದಲೇ ಸುಮಾರು 400 ಪೊಲೀಸರು ಇದರ ಕಾವಲು ಕಾಯುತ್ತಿದ್ದಾರೆ.
ಹೋಟೆಲ್ ಬುಕ್ಕಿಂಗ್ ಸ್ಥಗಿತ: ಶಿವಸೇನೆ ಶಾಸಕರಿಗೆ ಹೋಟೆಲ್ ಆತಿಥ್ಯ ಕಲ್ಪಿಸಿರುವುದರಿಂದ ಹೋಟೆಲ್ನಲ್ಲಿ ಅನಿರ್ದಿಷ್ಟ ಅವಧಿಗೆ ಹೊಸ ಬುಕಿಂಗ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲಾಗಿದೆ. ಸೋಮವಾರ ರಾತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಶಾಸಕರು ಆಗಮಿಸಿದ ನಂತರ 300 ರಿಂದ 400 ಪೊಲೀಸರನ್ನು ಹೋಟೆಲ್ ಆವರಣದ ಒಳಗೆ ಮತ್ತು ಹೊರಗೂ ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅನಧಿಕೃತ ವ್ಯಕ್ತಿಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರವೇಶ ಮತ್ತು ನಿರ್ಗಮನ ಎರಡೂ ಮಾರ್ಗಗಳಲ್ಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.