ಕರ್ನಾಟಕ

karnataka

ETV Bharat / bharat

ಸಿಖ್​ ಮಹಿಳೆಯ ಶಿರವಸ್ತ್ರದಂತೆ, ಹಿಜಾಬ್ ಕೂಡ ಮುಖ್ಯ: ಅರ್ಜಿದಾರರ ಪರ ವಕೀಲರ ವಾದ

ಹಿಜಾಬ್​ ಪರವಾಗಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಾಲ್ಕನೇ ದಿನವೂ ನಡೆಸಿತು. ಬುಧವಾರವೂ ವಿಚಾರಣೆ ಮುಂದುವರೆಯಲಿದೆ.

supreme-court-start-hearing-hijab-case-on-4th-day
ಹಿಜಾಬ್​ ವಿವಾದ

By

Published : Sep 12, 2022, 3:02 PM IST

Updated : Sep 12, 2022, 5:00 PM IST

ನವದೆಹಲಿ:ಕರ್ನಾಟಕದಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಧಾರಣೆ ನಿಷೇಧಿಸಿ ಹೈಕೋರ್ಟ್​ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ನಾಲ್ಕನೆಯ ದಿನದ ವಿಚಾರಣೆ ಮುಕ್ತಾಯಗೊಳಿಸಿದ್ದು, ಮುಂದಿನ ವಿಚಾರಣೆ ಬುಧವಾರ ಬೆಳಗ್ಗೆ 11;30 ಕ್ಕೆ ನಿಗದಿ ಮಾಡಲಾಗಿದೆ.

ಇಂದಿನ ವಿಚಾರಣೆಯ ಸಾರ:ಸುಪ್ರೀಂಕೋರ್ಟ್​ನಲ್ಲಿ ಹಿಜಾಬ್​ ಮೇಲ್ಮನವಿ ಕುರಿತಾಗಿ ನಡೆದ ವಿಚಾರಣೆಯ ವೇಳೆ ಮತ್ತೆ ಸಿಖ್​ ವಸ್ತ್ರದ ಬಗ್ಗೆ ಪ್ರಸ್ತಾಪವಾಗಿದೆ. ಗುರುದ್ವಾರಕ್ಕೆ ಮಹಿಳೆ ಪ್ರವೇಶಿಸಿದಾಗ ಅವರು ತಲೆಯ ಮೇಲೆ ವಸ್ತ್ರವನ್ನು ಧರಿಸಿರುತ್ತಾರೆ. ಇದು ಅಲ್ಲಿನ ಧಾರ್ಮಿಕ ಆಚರಣೆ. ಅದೇ ರೀತಿ ಹಿಜಾಬ್​ ಕೂಡ ಇಸ್ಲಾಂ ಧರ್ಮದ ಆಚರಣೆ ಎಂದು ಫಿರ್ಯಾದುದಾರರ ಪರ ವಕೀಲ ಸಲ್ಮಾನ್​ ಖುರ್ಷಿದ್​ ವಾದ ಮಂಡಿಸಿದರು.

ಹಿಜಾಬ್​, ಹಿಲ್ಬಾಬ್​, ಬುರ್ಖಾ ಮೂರೂ ಬೇರೆ ಬೇರೆ..:ಮುಸ್ಲಿಂ ಮಹಿಳೆಯರು ಮೂರು ರೀತಿಯ ವಸ್ತ್ರಗಳನ್ನು ಧರಿಸುತ್ತಾರೆ. ಹಿಜಾಬ್​, ಹಿಲ್ಬಾಬ್​, ಬುರ್ಖಾ ಈ ಮೂರು ಬೇರೆ ಬೇರೆಯಾಗಿವೆ. ಇವು ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಕುರಾನ್​ ಪ್ರಕಾರ ಹಿಜಾಬ್ ಒಂದು ಪರದೆಯಾಗಿದೆ. ಅದು ಧರ್ಮ ಅಥವಾ ಸಂಸ್ಕೃತಿಯ ಪ್ರತೀಕವಾಗಿದೆ. ಉತ್ತರ ಭಾರತದಲ್ಲಿ ಘೂಂಘಾಟ್ ಬಹಳ ಅವಶ್ಯಕ ಎಂದು ಪರಿಗಣಿತವಾಗಿದೆ. ಹಾಗೆಯೇ ಹಿಜಾಬ್​ ಕೂಡ ಅತ್ಯಗತ್ಯವೆಂದು ಮುಸ್ಲಿಂ ಮಹಿಳೆಯರು ಪರಿಗಣಿಸಿದ್ದಾರೆ ಎಂದು ಸಲ್ಮಾನ್​ ಖುರ್ಷಿದ್​ ವಾದಿಸಿದರು.

ಗುರುದ್ವಾರಕ್ಕೆ ಹೋಗುವ ಭಕ್ತರು ಯಾವಾಗಲೂ ತಮ್ಮ ತಲೆಯನ್ನು ವಸ್ತ್ರದಿಂದ ಮುಚ್ಚಿರುತ್ತಾರೆ. ಇದು ಆ ಧರ್ಮದ ಸಂಸ್ಕೃತಿ. ಮಸೀದಿಗಳಲ್ಲಿ ಶಿರವಸ್ತ್ರ ಧರಿಸುತ್ತಾರೆ. ಇದೂ ಕೂಡ ಸಂಸ್ಕೃತಿ ಎಂದರು.

ಧರ್ಮದ ನಿಯಮಗಳನ್ನು ಪಾಲಿಸುವವನಿಗೆ ದೇವರು ಕರುಣಾಮಯಿ. ಆತ ಉತ್ತಮ ಫಲಗಳನ್ನು ಅನುಭವಿಸುತ್ತಾನೆ. ಆದರೆ ಪಾಲಿಸದವರಿಗೆ ನರಕಯಾತನೆ ಎಂಬ ನಿಬಂಧನೆಗಳು ಕುರಾನ್​ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇವೆಲ್ಲವೂ ಮರಣಾನಂತರದ ಸಂಗತಿಗಳಾಗಿವೆ. ಈ ನಂಬಿಕೆ ಜನರಲ್ಲಿದೆ ಎಂದು ಕೋರ್ಟ್​ಗೆ ಅರಿಕೆ ಮಾಡಿದರು.

ಧಾರ್ಮಿಕ ಅನ್ವಯ ವಿಷಯದಲ್ಲಿ ತಪ್ಪಾದ ನಿರ್ಧಾರ:ಕರ್ನಾಟಕ ಹೈಕೋರ್ಟ್ ತೀರ್ಪು ಹಲವು ವಿಷಯಗಳಲ್ಲಿ ಸರಿಯಾಗಿದ್ದರೂ, ಧಾರ್ಮಿಕ ವಿಷಯದ ಅನ್ವಯದಲ್ಲಿ ತಪ್ಪಾಗಿದೆ. ಒಬ್ಬ ಸಿಖ್ ಮಹಿಳೆ ಧರಿಸುವ ವಸ್ತ್ರದಂತೆ ಹಿಜಾಬ್​ ಕೂಡ ಮುಖ್ಯ ಎಂದು ಸಲ್ಮಾನ್​ ಖುರ್ಷಿದ್​ ಹೇಳಿದರು.

ವಾದ ಆಲಿಸಿದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್​ 14 ಕ್ಕೆ ಮುಂದೂಡಿದರು. ಅಲ್ಲದೇ, ಗುರುವಾರದ ಒಳಗಾಗಿ ವಾದವನ್ನು ಪೂರ್ಣಗೊಳಿಸಲು ಸೂಚಿಸಿದರು.

ಮೂರನೇ ದಿನದ ವಿಚಾರಣೆಯಲ್ಲಿ ಸಿಖ್ಖರು ಪೇಟ ಧರಿಸುತ್ತಾರಲ್ಲವೇ ಎಂದು ದೇವದತ್​ ಕಾಮತ್​ ವಾದ ಮಂಡಿಸಿದ್ದರು. ಇದಕ್ಕೆ ಕೋರ್ಟ್​, ಪೇಟ ಸಿಖ್​ ಧಾರ್ಮಿಕ ಆಚರಣೆಯ ಭಾಗ. ಹಿಜಾಬ್​ ಅನ್ನು ಎಲ್ಲಿಯೂ ಧಾರ್ಮಿಕ ಆಚರಣೆಯ ಭಾಗವೆಂದು ಪರಿಗಣಿಸಲಾಗಿಲ್ಲ ಎಂದು ಹೇಳಿತ್ತು.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಅರ್ಜಿಗಳ ಪರ - ವಿರೋಧದ ವಿಚಾರಣೆ ನಡೆಸಿತು. ಹಿಜಾಬ್​ ಪರವಾಗಿ ಸಲ್ಲಿಸಲಾದ 23 ಅರ್ಜಿಗಳನ್ನು ಒಟ್ಟು ಮಾಡಿ ಕೋರ್ಟ್ ವಿಚಾರಿಸುತ್ತಿದೆ. ಫಿರ್ಯಾದುದಾರರ ಪರವಾಗಿ ವಕೀಲ ಯುಸೂಫ್​ ಮುಚ್ಚಲ್​ ಮೊದಲು ವಾದ ಮಂಡಿಸಿದರು.

ಪ್ರಕರಣವೇನು?:ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಈ ಹಿಜಾಬ್​ ವಿವಾದ ದೇಶ ಸೇರಿದಂತೆ ವಿದೇಶಕ್ಕೂ ಇದು ಹಬ್ಬಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್​ ಧರಿಸಿ ಬಂದಿದ್ದನ್ನು ಪ್ರಶ್ನಿಸಲಾಗಿತ್ತು. ಬಳಿಕ ಶಾಲಾ ಅಭಿವೃದ್ಧಿ ಸಮಿತಿ ಕಾಲೇಜಿನಲ್ಲಿ ಹಿಜಾಬ್​ ಧರಿಸಿ ಬರುವುದನ್ನು ನಿಷೇಧಿಸಿತ್ತು. ಬಳಿಕ ಸರ್ಕಾರವೂ ಕೂಡ ಸಮವಸ್ತ್ರ ನಿಯಮ ರೂಪಿಸುವ ಹಕ್ಕು ಸಮಿತಿಗಳಿಗಿದೆ ಎಂಬ ಆದೇಶ ಹೊರಡಿಸಿತ್ತು.

ಇದರ ವಿರುದ್ಧ ಹೈಕೋರ್ಟ್​ನಲ್ಲಿ ದಾವೆ ಹೂಡಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠವು ಶಾಲಾ - ಕಾಲೇಜುಗಳ ತರಗತಿಯೊಳಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಅಧಿಕಾರ ಸರ್ಕಾರಿ ಕಾಲೇಜುಗಳ ಅಭಿವೃದ್ಧಿ ಸಮಿತಿಗಳಿಗಿದೆ ಎಂಬ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದು ಮಾರ್ಚ್ 15 ರಂದು ತೀರ್ಪು ನೀಡಿತ್ತು.

ಓದಿ:ಜ್ಞಾನವಾಪಿ ಶಿವಲಿಂಗಕ್ಕೆ ಪೂಜೆ: ಮಹಿಳೆಯರ ಅರ್ಜಿ ಪುರಸ್ಕರಿಸಿದ ವಾರಾಣಸಿ ಕೋರ್ಟ್​

Last Updated : Sep 12, 2022, 5:00 PM IST

ABOUT THE AUTHOR

...view details