ಕೊರಬಾ(ಛತ್ತೀಸ್‌ಗಢ): ಕಲ್ಲಿದ್ದಲು ಬಿಕ್ಕಟ್ಟನ್ನು ನೀಗಿಸಲು ರೈಲ್ವೆಯು ಕೊರಬಾದಿಂದ ನಾಗ್ಪುರಕ್ಕೆ ಒಂದೇ ಬಾರಿಗೆ 16000 ಟನ್ ಕಲ್ಲಿದ್ದಲನ್ನು ರವಾನಿಸಿದೆ. ಇದಕ್ಕಾಗಿ ನಾಲ್ಕು ಗೂಡ್ಸ್ ರೈಲುಗಳನ್ನು ಜೋಡಿಸಿ ಸೂಪರ್ ಶೇಷನಾಗ್ ರೈಲು ನಿರ್ಮಿಸಲಾಗಿದೆ. ಈ ರೈಲಿನಲ್ಲಿ ನಾಲ್ಕು ಇಂಜಿನ್ಗಳು ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ.
ರೈಲ್ವೆಯ ಹೊಸ ದಾಖಲೆ: ನಾಲ್ಕು ಬ್ರೇಕ್ ವಾಹನಗಳು ಸೇರಿದಂತೆ ಒಟ್ಟು 12 ಸಿಬ್ಬಂದಿಯೊಂದಿಗೆ ಕೊರಬಾದಿಂದ ನಾಗ್ಪುರಕ್ಕೆ ವಿಶೇಷ ರೈಲನ್ನು ರವಾನಿಸಲಾಗಿದೆ. ಗೂಡ್ಸ್ ರೈಲುಗಳ ನಾಲ್ಕು ರೇಕ್‌ಗಳಲ್ಲಿ ಒಟ್ಟು 232 ವ್ಯಾಗನ್‌ಗಳನ್ನು ಕಳುಹಿಸಿಕೊಡಲಾಗಿದೆ. ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ಒಂದೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಕಲ್ಲಿದ್ದಲನ್ನು ರವಾನಿಸುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದೆ.
3 ಕಿಲೋಮೀಟರ್‌ಗಿಂತ ಹೆಚ್ಚು ಉದ್ದವಾಗಿದೆ ಈ ಸೂಪರ್ ಶೇಷನಾಗ ರೈಲು: ನಾಲ್ಕು ಸರಕು ರೈಲುಗಳನ್ನು ಜೋಡಿಸುವ ಮೂಲಕ ಸೂಪರ್ ಶೇಷನಾಗ ರೈಲು ತಯಾರಿಸಲಾಗಿದೆ. ಇದರ ಉದ್ದ 3.2 ಕಿಲೋಮೀಟರ್. ಮಹಾರಾಷ್ಟ್ರದ ನಾಸಿಕ್ ಬಳಿ ಕಾರ್ಯನಿರ್ವಹಿಸುತ್ತಿರುವ ಸರ್ ರತನ್ ವಿದ್ಯುತ್ ಸ್ಥಾವರಕ್ಕೆ ಸೋಮವಾರ ಮಧ್ಯಾಹ್ನ 12:00 ರ ಸುಮಾರಿಗೆ ಕೊರಬಾದಿಂದ ಈ ರೈಲನ್ನು ಕಳುಹಿಸಲಾಗಿದೆ. ಇದರಲ್ಲಿ 16000 ಟನ್ ಕಲ್ಲಿದ್ದಲನ್ನು ತುಂಬಲಾಗಿದ್ದು, ಒಂದೇ ಬಾರಿಗೆ ಇಷ್ಟೊಂದು ಪ್ರಮಾಣದ ಕಲ್ಲಿದ್ದಲು ರವಾನೆಯಾಗಿರುವುದು ಹೊಸ ದಾಖಲೆಯಾಗಿದೆ.
ಶೇಷನಾಗ ಪಯಣ: ಈ ಮೊದಲು ಕೂಡ ಶೇಷನಾಗ ರೈಲು ಓಡಿಸಲಾಗಿತ್ತು. ಕಳೆದ ವರ್ಷ ಎರಡು ಗೂಡ್ಸ್ ರೈಲುಗಳನ್ನು ಸಂಪರ್ಕಿಸುವ ಮೂಲಕ ಶೇಷನಾಗ್ ರೈಲನ್ನು ಓಡಿಸಲಾಗಿತ್ತು. ಆದರೆ, ಈ ಬಾರಿ ನಾಲ್ಕು ಸರಕು ರೈಲುಗಳನ್ನು ಸಂಪರ್ಕಿಸುವ ಮೂಲಕ ಕೊರಬಾದಿಂದ ಸೂಪರ್ ಶೇಷನಾಗ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದ್ದು ಇದೇ ಮೊದಲು.