ನವದೆಹಲಿ:ಸುಲ್ಲಿ ಡೀಲ್ಸ್ ಆ್ಯಪ್ ಸೃಷ್ಟಿಕರ್ತ ಓಂಕಾರೇಶ್ವರ್ ಬಂಧನದ ಬಳಿಕ ನಡೆಯುತ್ತಿರುವ ವಿಚಾರಣೆಯಲ್ಲಿ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಆ್ಯಪ್ನಲ್ಲಿ ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಟ್ವಿಟರ್ನಲ್ಲಿ ಹರಡುತ್ತಿದ್ದ ಯುವತಿಯರನ್ನೇ ಟಾರ್ಗೆಟ್ ಮಾಡಲಾಗುತ್ತಿತ್ತು ಎಂದು ಓಂಕಾರೇಶ್ವರ್ ಒಪ್ಪಿಕೊಂಡಿದ್ದಾನೆ.
ಹಿಂದು ದೇವಾಲಯಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಯುವತಿಯರನ್ನು ಅಶ್ಲೀಲವಾಗಿ ಚಿತ್ರಿಸಿ ಆ್ಯಪ್ ಮೂಲಕ ಹರಾಜು ಹಾಕಲಾಗುತ್ತಿತ್ತು. ಇದರಲ್ಲಿ ಮುಸ್ಲಿಂ ಹುಡುಗಿಯರನ್ನೇ ಟಾರ್ಗೆಟ್ ಮಾಡಲಾಗುತ್ತಿತ್ತು. ಅಂತಹವರನ್ನೇ ಹುಡುಕಿ ಅಶ್ಲೀಲವಾಗಿ ತೋರಿಸಿ ಟ್ವಿಟರ್ನಲ್ಲಿ ಹರಾಜು ಹಾಕುತ್ತಿದ್ದೆವು ಎಂಬ ವಿಚಾರವನ್ನು ಆರೋಪಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಓಂಕಾರೇಶ್ವರನ ಮೊಬೈಲ್, ಮ್ಯಾಕ್ ಬುಕ್ ಅನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಅಳಿಸಿ ಹಾಕಲಾದ ದತ್ತಾಂಶಗಳನ್ನು ಮರು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದು ಧರ್ಮ, ದೇವಾಲಯಗಳು, ದೇವರ ಬಗ್ಗೆ ಅನೇಕ ಮುಸ್ಲಿಂ ಹುಡುಗಿಯರು ಆಕ್ಷೇಪಾರ್ಹ ಟ್ವೀಟ್ ಮಾಡುವವರನ್ನು ಗುರುತಿಸಿ, ಅವರನ್ನು ಅಶ್ಲೀಲವಾಗಿ ಚಿತ್ರಿಸಿ ಟ್ವಿಟರ್ನಲ್ಲಿ ಹರಾಜು ಮಾಡುತ್ತಿದ್ದ. ಇದಕ್ಕಾಗಿಯೇ ಓಂಕಾರೇಶ್ವರ್ ಮಹಾಸಭಾ ಹೆಸರಿನ ಟ್ವಿಟರ್ ಗುಂಪನ್ನು ರಚನೆ ಮಾಡಿದ್ದ.