ತಿರುಚಿ(ತಮಿಳುನಾಡು):ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚಿಯ ಬಳಿಯ ನಾವಲ್ಪಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ನಾವಲ್ಪಟ್ಟು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 56 ವರ್ಷದ ಭೂಮಿನಾಥನ್, ಕೊಲೆಗೀಡಾದ ಪಿಎಸ್ಐ ಆಗಿದ್ದಾರೆ. ಗಸ್ತು ತಿರುಗುತ್ತಿದ್ದ ವೇಳೆ ಮೇಕೆ ಕಳ್ಳರನ್ನು ತಡೆಯಲು ಮುಂದಾಗಿ, ಅವರಿಂದ ಹಲ್ಲೆಗೊಳಗಾಗಿ ಭೂಮಿನಾಥನ್ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ನಾವಲ್ಪಟ್ಟು ಮುಖ್ಯರಸ್ತೆಯಲ್ಲಿ ಸಬ್ ಇನ್ಸ್ಪೆಕ್ಟರ್ ಭೂಮಿನಾಥನ್ ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಮೂರು ಬೈಕ್ಗಳಲ್ಲಿ ಮೇಕೆಗಳನ್ನು ಸಾಗಿಸುತ್ತಿದ್ದರು. ಇದನ್ನು ಕಂಡ ಭೂಮಿನಾಥನ್ ವಿಚಾರಿಸುವಷ್ಟರಲ್ಲಿ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ತಮ್ಮ ಬೈಕ್ನಲ್ಲಿ ಭೂಮಿನಾಥನ್ ಹಿಂಬಾಲಿಸಿದ್ದಾರೆ.
ತಿರುಚಿ-ಪುದುಕೊಟ್ಟೈ ಮಾರ್ಗದಲ್ಲಿರುವ ಪಲ್ಲತ್ತುಪಟ್ಟಿ ಎಂಬ ಗ್ರಾಮ ಬಳಿಯಿರುವ ರೈಲ್ವೆ ಗೇಟ್ನ ಬಳಿ ಒಂದು ಬೈಕ್ ಅಡ್ಡಗಟ್ಟಿದ ಅವರು ಇಬ್ಬರು ವ್ಯಕ್ತಿಗಳನ್ನು ಹಿಡಿದಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಪರಾರಿಯಾಗಿದ್ದ ಎರಡು ಬೈಕ್ನಲ್ಲಿದ್ದ ದುಷ್ಕರ್ಮಿಗಳು ವಾಪಸ್ ಆಗಿ ಗಲಾಟೆ ಆರಂಭಿಸಿದ್ದಾರೆ.
ಇದೇ ವೇಳೆ ತಮ್ಮ ಬಳಿಯಿರುವ ಕುಡುಗೋಲಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ. ಸ್ಥಳದಲ್ಲೇ ಕುಸಿದುಬಿದ್ದ ಸಬ್ ಇನ್ಸ್ಪೆಕ್ಟರ್ ಅತಿಯಾದ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ.
ಮುಂಜಾನೆ ಎರಡು ಗಂಟೆಗೆ ಘಟನೆ ಸಂಭವಿಸಿದ್ದು, ಐದು ಗಂಟೆ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ನಂತರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಎಟಿಎಂ ಯಂತ್ರ ಇದ್ದಂಗೇ ಇದೆ, ಆದ್ರೂ 16 ಲಕ್ಷ ಮಂಗಮಾಯ: ದರೋಡೆ ಆಗಿದ್ದೇಗೆ?