ಕರ್ನಾಟಕ

karnataka

ETV Bharat / bharat

ತಾಜ್​ ಮಹಲ್​ ಸೌಂದರ್ಯ ಕುಂದಿಸುತ್ತಿರುವ ಕೀಟಗಳು; ಕ್ರಮಕ್ಕೆ ಮುಂದಾದ ಎಎಸ್​ಐ - ಭಾರತೀಯ ಪುರಾತತ್ವ ಇಲಾಖೆ

Green stains on Taj Mahal: 2015ರಲ್ಲಿ ಮೊದಲ ಬಾರಿಗೆ ತಾಜ್​ ಮಹಲ್​ ಮೇಲೆ ಕಂದು-ಹಸಿರುವ ಬಣ್ಣದ ಕಲೆ ಕಂಡುಬಂದಿತ್ತು. ಇದಕ್ಕೆ ಮುಖ್ಯ ಕಾರಣ ಗೋಲ್ಡಿ ಚಿರೊನೊಮಸ್​​ ಎಂಬ ಹೆಸರಿನ ಸಣ್ಣ ಕೀಟಗಳು.

study to find ways to prevent the green colour  stains on the Taj Mahal
study to find ways to prevent the green colour stains on the Taj Mahal

By ETV Bharat Karnataka Team

Published : Nov 30, 2023, 1:19 PM IST

ಆಗ್ರಾ(ಉತ್ತರ ಪ್ರದೇಶ): ವಿಶ್ವವಿಖ್ಯಾತ ತಾಜ್​ ಮಹಲ್​ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಅದ್ಭುತ ವಾಸ್ತುಶಿಲ್ಪದ, ಬಿಳಿ ಬಣ್ಣದ ಅಮೃತ ಶಿಲೆಯ ಭವ್ಯ ಸ್ಮಾರಕದಲ್ಲಿ ಇತ್ತೀಚಿನ ದಿನಗಳಲ್ಲಿ ಹಸಿರ ಕಲೆಗಳು ಕಾಣುತ್ತಿವೆ. ಶುಚಿಗೊಳಿಸಿದಂತೆ ಪ್ರತಿ ವರ್ಷವೂ ಕಾಡುತ್ತಿರುವ ಈ ಕಲೆಗಳು ಮೂಡಲು ಕಾರಣ ಯಮುನಾ ನದಿ ತೀರದಲ್ಲಿರುವ ಕೀಟಗಳು. ಈ ಕೀಟಗಳ ಮಲದಿಂದ ಇಂಥ ಕಲೆಗಳು ಉಂಟಾಗುತ್ತಿದ್ದು, ಆಳ ಅಧ್ಯಯನಕ್ಕೆ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಮುಂದಾಗಿದೆ.

2015ರಲ್ಲಿ ಮೊದಲ ಬಾರಿಗೆ ತಾಜ್​ ಮಹಲ್​ ಮೇಲೆ ಕಂದು-ಹಸಿರು ಬಣ್ಣದ ಕಲೆಗಳು ಕಂಡುಬಂದಿತ್ತು. ಇದಕ್ಕೆ ಕಾರಣ ಗೋಲ್ಡಿ ಚಿರೊನೊಮಸ್​​ ಎಂಬ ಸಣ್ಣ ಕೀಟಗಳು. ಆದರೆ, ಈ ವಾದವನ್ನು ಕೆಲವರು ತಳ್ಳಿ ಹಾಕಿದ್ದಾರೆ. ಒಂದೊಮ್ಮೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ಕಲೆಯನ್ನು ಮಡ್​ ಪ್ಯಾಕ್​ನೊಂದಿಗೆ ಮುಚ್ಚಿದ್ದಾರೆ. ಆದರೆ, ಇದಾದ ಎರಡು ವರ್ಷಕ್ಕೆ ಮತ್ತೆ ಕಲೆ ಕಾಣಿಸಿಕೊಳ್ಳುತ್ತಿದೆ. 2020ರಲ್ಲಿ ಕೋವಿಡ್​ ಲಾಕ್​ಡೌನ್‌ನಿಂದಾಗಿ ಆಗ್ರಾದಲ್ಲಿ ಮಾಲಿನ್ಯಮಟ್ಟ ಕಡಿಮೆ ಇದ್ದಾಗಲೂ ಇದು ಕಾಣಿಸಿಕೊಂಡಿದೆ.

ಈ ಕುರಿತು ಮಾತನಾಡಿರುವ ಎಎಸ್​ಐನ ಪುರಾತತ್ವ ತಜ್ಞ ರಾಜ್​ಕುಮಾರ್​ ಪಟೇಲ್​​, "ಯಮುನಾ ನದಿ ತೀರದಲ್ಲಿರುವ ಸ್ಮಾರಕದಲ್ಲಿ ಕಂದು-ಹಸಿರುವ ಬಣ್ಣದ ಕಲೆ ಕಾಣಿಸುತ್ತಿದೆ. ಎಎಸ್​ಐ ರಾಸಾಯನಿಕ ವಿಭಾಗ​​, ಕೀಟಗಳ ಮಲಗಳಿಂದ ಆಗುತ್ತಿರುವ ಈ ಕಲೆಯನ್ನು ಡಿಸ್ಟಿಲ್ಡ್​​ ವಾಟರ್​​ ಮೂಲಕ ಸ್ವಚ್ಛ ಮಾಡಿದ್ದಾರೆ. ಆದಾಗ್ಯೂ ಪ್ರತಿವರ್ಷ ಈ ಕಲೆ ಕಾಣಿಸುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ".

"ಯಮುನಾ ನದಿಯಲ್ಲಿ ಮಾರ್ಚ್​-ಏಪ್ರಿಲ್​ ಮತ್ತು ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ತಾಪಮಾನ 28-35 ಡಿಗ್ರಿ ಇದ್ದು, ಈ ಸಂದರ್ಭದಲ್ಲಿ ಈ ಕೀಟಗಳು ಕಾಣಿಸಿಕೊಳ್ಳುತ್ತವೆ. ಈ ಕಲೆಗಳು ನವೆಂಬರ್​ ಬಳಿಕ ಹೆಚ್ಚು. ಕೀಟಗಳ ಸಂತಾನೋತ್ಪತ್ತಿ ಜಾಸ್ತಿಯಾದಂತೆ ಕಲೆಗಳೂ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಕೀಟಗಳ ಸಂತಾನೋತ್ಪತ್ತಿ ಚಕ್ರ ಅರ್ಥ ಮಾಡಿಕೊಳ್ಳುವಿಕೆ ಮತ್ತು ಪ್ರಸರಣ ಪರಿಸ್ಥಿತಿ ಹಾಗು ತಾಜ್​ ಮಹಲ್​ಗೆ ಇದು ಹಾನಿಯಾಗದಂತೆ ತಡೆಯುವ ಮಾದರಿಗಳ ಕುರಿತು ಆಳವಾದ ಅಧ್ಯಯನಕ್ಕೆ ಎಎಸ್​ಐನ ಕೆಮಿಕಲ್​ ವಿಭಾಗ ಮುಂದಾಗಿದೆ" ಎಂದು ಪಟೇಲ್​ ತಿಳಿಸಿದರು.

ಈ ನಡುವೆ ಆಗ್ರಾ ಟೂರಿಸ್ಟ್​ ವೆಲ್​​ಫೇರ್​ ಚೇಂಬರ್​ ಕೂಡ ತಾಜ್​ ಬ್ಯಾರೇಜ್​ ನಿರ್ಮಾಣ ಯೋಜನೆಯಿಂದ ವಾಯು ಮಾಲಿನ್ಯ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಧ್ವನಿ ಎತ್ತಿದೆ. ಅಲ್ಲದೇ ಈ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಗಂಡ - ಹೆಂಡತಿ ಕಾಳಗದಿಂದ ವಿಮಾನದ ಮಾರ್ಗ ಬದಲು, ತುರ್ತು ಭೂಸ್ಪರ್ಶ!

ABOUT THE AUTHOR

...view details