ಗುವಾಹಟಿ: ಅಸ್ಸಾಂನ ದಿಬ್ರುಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ರ್‍ಯಾಗಿಂಗ್‌ನಿಂದ ತಪ್ಪಿಸಿಕೊಳ್ಳಲು ಎರಡು ಅಂತಸ್ತಿನ ಕಟ್ಟಡದಿಂದ ಜಿಗಿದು ತೀವ್ರವಾಗಿ ಗಾಯಗೊಂಡಿದ್ದಾನೆ. ಕಟ್ಟಡದಿಂದ ಕೆಳಗೆ ಜಿಗಿದ ವಿದ್ಯಾರ್ಥಿಯನ್ನು ಆನಂದ್ ಶರ್ಮಾ ಎಂದು ಗುರುತಿಸಲಾಗಿದ್ದು, ಆತನನ್ನು ದಿಬ್ರುಗಢದ ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಎರಡು ದಿನಗಳ ಹಿಂದೆ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಆನಂದ್ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳಿಗೆ ಕಾಲೇಜಿನ ಸೀನಿಯರ್ಸ್ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ನಂತರ ವಿದ್ಯಾರ್ಥಿಯು ಓಡಿಹೋಗಿ ಕಟ್ಟಡದಿಂದ ಜಿಗಿದಿದ್ದಾನೆ. ವಿಶ್ವವಿದ್ಯಾನಿಲಯದ ಅಧಿಕಾರಿಗಳು ಘಟನೆಯಲ್ಲಿ ಭಾಗಿಯಾದ ಆರೋಪದ ಮೇಲೆ ಹಲವಾರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ಈ ಮಧ್ಯೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.