ಹೈದರಾಬಾದ್:ಕೌಶಲ್ಯಾಭಿವೃದ್ಧಿ ಹಗರಣದಲ್ಲಿ 14 ದಿನ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿರುವ ತೆಲುಗು ದೇಶಂ ಪಕ್ಷದ(ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ಕಾರ್ಯಕರ್ತರು ಆಂಧ್ರಪ್ರದೇಶ ರಾಜ್ಯಾದ್ಯಂತ ಬಂದ್ ನಡೆಸುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಹಲವೆಡೆ ಬಸ್‌ಗಳು ರಸ್ತೆಗಿಳಿಯಲಿಲ್ಲ. ಅಂಗಡಿ ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಲಾಗಿವೆ.
ಆಂಧ್ರಪ್ರದೇಶ ಮಾಜಿ ಸಿಎಂ ನಾಯ್ಡು ಅವರನ್ನು ಬಂಧನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಟಿಡಿಪಿ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರು ಬಂದ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲೆಂದರಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಹಲವೆಡೆ ಮುಷ್ಕರ ನಡೆದಿದೆ. ರಾಜ್ಯದ ಹಲವೆಡೆ ಬಸ್‌ಗಳು ರಸ್ತೆಗಿಳಿದಿಲ್ಲ.
ಇದರ ಜೊತೆಗೆ ಹಲವೆಡೆ ಮಾರುಕಟ್ಟೆಗಳು ಮತ್ತು ಶಾಲೆಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ. ಹಲವು ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಕೂಡ ಇದೆ. ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ರಾಜ್ಯಾದ್ಯಂತ ಪ್ರಮುಖ ನಾಯಕರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ. ಇದು ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಜೈಲು ಬೇಡ, ಗೃಹ ಬಂಧನ ನೀಡಿ:ಚಂದ್ರಬಾಬು ನಾಯ್ಡು ಅವರನ್ನು ಜೈಲಿನ ಬದಲಿಗೆ ಗೃಹ ಬಂಧನಕ್ಕೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ಎಸಿಬಿ ಕೋರ್ಟ್ನಲ್ಲಿ ನಡೆಯಿತು. ಸಿಐಡಿ ಪರವಾಗಿ ಸರ್ಕಾರಿ ವಕೀಲ ಎಎಜಿ ಪೊನ್ನವೋಲು ವಾದ ಮಂಡಿಸಿದರೆ, ಚಂದ್ರಬಾಬು ಅವರ ಪರವಾಗಿ ಸಿದ್ಧಾರ್ಥ ಲೂತ್ರಾ ವಾದಿಸಿದರು. ಗೃಹ ಬಂಧನಕ್ಕೆ ಅವಕಾಶ ನೀಡುವಂತೆ ಚಂದ್ರಬಾಬು ಪರ ವಕೀಲರು ಭಾನುವಾರ ಅರ್ಜಿ ಸಲ್ಲಿಸಿದ್ದರು.
ಚಂದ್ರಬಾಬು ನಾಯ್ಡು ಅವರು ಮನೆಯಲ್ಲಿರುವುದಕ್ಕಿಂತ ಜೈಲಿನಲ್ಲಿ ಸುರಕ್ಷಿತವಾಗಿರುತ್ತಾರೆ. ಅವರ ಆರೋಗ್ಯ ಚೆನ್ನಾಗಿದೆ. ಜೈಲಿನಲ್ಲಿ ಸಂಪೂರ್ಣ ಭದ್ರತೆ ಒದಗಿಸಲಾಗುತ್ತದೆ. ಜೈಲಿನ ಒಳಗೆ ಮತ್ತು ಹೊರಗೆ ಪೊಲೀಸ್ ಭದ್ರತೆ ಇದೆ. ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಾರೆ. ಅಗತ್ಯವಿದ್ದರೆ ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದು ಸರ್ಕಾರದ ಪರ ವಕೀಲರು ವಾದಿಸಿದರು.
ಆದರೆ, ಇದರ ವಿರುದ್ಧವಾಗಿ ಲೂತ್ರಾ ಅವರು ವಾದಿಸಿ, ಚಂದ್ರಬಾಬು ಅವರಿಗೆ ಜೈಲಿನಲ್ಲಿ ಅಪಾಯವಿದೆ. ಇಲ್ಲಿಯವರೆಗೆ ಅವರು ಎನ್ಎಸ್ಜಿ ಭದ್ರತೆಯಲ್ಲಿದ್ದರು. ಹೀಗಾಗಿ ಅವರನ್ನು ಗೃಹಬಂಧನಕ್ಕೆ ನೀಡಬೇಕು ಎಂದು ಈ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪನ್ನು ಲೂತ್ರಾ ವಿವರಿಸಿದರು.