ನವದೆಹಲಿ:ಸೇನಾ ಸಂಘರ್ಷ ಪೀಡಿತ ಸುಡಾನ್‌ನಿಂದ ಭಾರತೀಯರ ಸ್ಥಳಾಂತರ ಮಾಡುವ ಕಾರ್ಯ ಆರಂಭಿಸಲಾಗಿದೆ. ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರು ದೇಶಕ್ಕೆ ಬಂದ ನಂತರ ತಮ್ಮ ರಾಜ್ಯಗಳಿಗೆ ಕರೆ ತರಲು ಹಲವಾರು ರಾಜ್ಯಗಳು ಹೆಲ್ಪ್ ಡೆಸ್ಕ್‌ಗಳನ್ನು ತೆರೆದಿವೆ. ಜೊತೆಗೆ ಉಚಿತ ಪ್ರಯಾಣ ಮತ್ತು ವಸತಿಯಂತಹ ಸಹಾಯದ ಬಗ್ಗೆ ಘೋಷಿಸಿವೆ.
ಸುಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸೋಮವಾರದಿಂದ 'ಆಪರೇಷನ್ ಕಾವೇರಿ' ಹೆಸರಲ್ಲಿ ಕೇಂದ್ರ ಸರ್ಕಾರ ಕಾರ್ಯಾಚರಣೆ ಕೈಗೊಂಡಿದೆ. ಭಾರತೀಯ ವಾಯುಪಡೆಯ (IAF) ಎರಡು ಮಿಲಿಟರಿ ಸಾರಿಗೆ ವಿಮಾನಗಳು ಸುಡಾನ್‌ನಿಂದ 530ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಿವೆ. ಜೊತೆಗೆ ಭಾರತವು ಜೆಡ್ಡಾದಲ್ಲಿ ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದೆ. ಎಲ್ಲಾ ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಿದ ನಂತರ ಸೌದಿ ಅರೇಬಿಯಾ ನಗರದ ಮೂಲಕ ತವರಿಗೆ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ.
ನೆರವು ಘೋಷಿಸಿದ ರಾಜ್ಯ ಸರ್ಕಾರಗಳು: ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಮಲಯಾಳಿಗರನ್ನು ರಾಜ್ಯಕ್ಕೆ ಕರೆತರಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ಕೇರಳ ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಅನಿವಾಸಿ ಕೇರಳಿಯರ ವ್ಯವಹಾರಗಳ (ನಾರ್ಕಾ) ಇಲಾಖೆ ಮೂಲಕ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ನಂತರ ಸಹಾಯ ನೀಡಲು ನಿರ್ಧರಿಸಿದೆ ಎಂದು ಸಿಎಂ ಕಚೇರಿ ತಿಳಿಸಿದೆ.
ಉತ್ತರ ಪ್ರದೇಶ ಸರ್ಕಾರ ಬುಧವಾರ ದೆಹಲಿಯ ರೆಸಿಡೆಂಟ್ ಕಮಿಷನರ್ ಕಚೇರಿಯಲ್ಲಿ ಸಹಾಯ ಕೇಂದ್ರವನ್ನು ತೆರೆದಿದೆ. ಸುಡಾನ್‌ನಿಂದ ಬರುವವರ ಸಮಸ್ಯೆಗಳ ಬಗ್ಗೆ ಸಹಾಯಕ ಪರಿಶೀಲನಾ ಅಧಿಕಾರಿ ನೀರಜ್ ಸಿಂಗ್ (89208 08414) ಅಥವಾ ಪ್ರೋಟೋಕಾಲ್ ಸಹಾಯಕ ಆಶಿಶ್ ಕುಮಾರ್ (93134 34088) ಅವರನ್ನು ಸಂಪರ್ಕಿಸಬಹುದು ಎಂದು ಹೆಚ್ಚುವರಿ ವಸತಿ ಆಯುಕ್ತೆ ಸೌಮ್ಯ ಶ್ರೀವಾಸ್ತವ್ ತಿಳಿಸಿದ್ದಾರೆ.