ಮುಂಬೈ: ಇತ್ತೀಚೆಗಷ್ಟೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದ ವಿರೋಧ ಪಕ್ಷಗಳ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಭಾಗವಹಿಸಿದ್ದರು.
ಇದು ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ (ಯುಪಿಎ)ಗೆ ಸೇರುತ್ತದೆ ಎಂಬುದಕ್ಕೆ ಸ್ಪಷ್ಟ ಸೂಚನೆ ಎಂಬುದು ವಿಶ್ಲೇಷಕರ ಅಭಿಮತ.
ಸೋನಿಯಾ ಗಾಂಧಿ ಆಗಸ್ಟ್ 20ರಂದು ವಿರೋಧ ಪಕ್ಷದ ನಾಯಕರ ಸಭೆ ಕರೆದಿದ್ದರು. 19 ವಿರೋಧ ಪಕ್ಷದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಇವುಗಳಲ್ಲಿ ಕಾಂಗ್ರೆಸ್, ಎನ್‌ಸಿಪಿ, ಟಿಎಂಸಿ, ಶಿವಸೇನೆ, ಇತರೆ ಪಕ್ಷದ ನಾಯಕರು ಇದ್ದರು.
ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ ಜೊತೆಗಿನ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದು, ಇದೀಗ ಮಾಜಿ ಎನ್‌ಡಿಎ ಮಿತ್ರ ಪಕ್ಷ ಶಿವಸೇನೆ ಯುಪಿಎ ಸೇರುವ ಊಹಾಪೋಹಗಳಿಗೆ ಕಾರಣವಾಗಿದೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು 2024ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವಂತೆ ಸಭೆಯಲ್ಲಿ ಮನವಿ ಮಾಡಿದರು. ಈ ಸಭೆಯಲ್ಲಿ ಉದ್ಧವ್ ಠಾಕ್ರೆ ವಿರೋಧ ಪಕ್ಷಗಳು ದೇಶದ ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಒಂದಾಗಬೇಕೆಂದು ಒತ್ತಾಯಿಸಿದರು.
ಮಹಾರಾಷ್ಟ್ರ ಸಿಎಂ, "ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿದರೆ, ನಾವು ಕೇಂದ್ರದಲ್ಲಿ ಪರ್ಯಾಯ ಸರ್ಕಾರವನ್ನು ತರಬಹುದು. ಈ ಬಗ್ಗೆ ನಾವು ಜನರಲ್ಲಿ ನಂಬಿಕೆ ಮೂಡಿಸಬೇಕು" ಎಂದು ಹೇಳಿದರು.
ರಾಜಕೀಯ ವಿಶ್ಲೇಷಕ ಸಂದೀಪ್ ಪ್ರಧಾನ್ ಅವರ ಪ್ರಕಾರ, 2024ರ ಲೋಕಸಭಾ ಚುನಾವಣೆಯ ನಂತರ ಅಧಿಕಾರದ ಕೀಲಿಕೈ ಕಾಂಗ್ರೆಸ್ ಕೈಗೆ ಸಿಲುಕಿದರೆ, ಶಿವಸೇನಾ ಸರ್ಕಾರ ರಚಿಸಲು ಉದ್ಧವ್ ಠಾಕ್ರೆ ಸಿಎಂ ಆಗಲು ಸಹಾಯ ಮಾಡಿದ ಕಾಂಗ್ರೆಸ್ ಅನ್ನು ಬೆಂಬಲಿಸುವುದು ಶಿವಸೇನೆಯ ರಾಜಕೀಯ ಒತ್ತಾಸೆಯಾಗಲಿದೆ.
ಆದ್ದರಿಂದ ಭವಿಷ್ಯದಲ್ಲಿ ಕೇಂದ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿರುತ್ತವೆ ಸಂದೀಪ್ ಪ್ರಧಾನ್ ವಿಶ್ಲೇಷಿಸುತ್ತಾರೆ. ಇನ್ನು, ಶಿವಸೇನೆಯ ವಕ್ತಾರ ಸಂಜಯ್ ರಾವತ್ ಅವರು ರಾಹುಲ್ ಗಾಂಧಿಗೆ ಹತ್ತಿರದವರಾಗಿದ್ದಾರೆ. ಜೊತೆಗೆ ಸಂಸತ್ತಿನಲ್ಲಿ ಕಾಂಗ್ರೆಸ್ ಕೈಗೊಂಡ ಪ್ರತಿ ಹೆಜ್ಜೆಯನ್ನೂ ಶಿವಸೇನೆ ಬೆಂಬಲಿಸುತ್ತಾ ಬಂದಿದೆ.
ಶಿವಸೇನೆ ಯುಪಿಎ ಸೇರಲಿದೆ ಎಂಬ ಊಹಾಪೋಹದ ಬಗ್ಗೆ ಬಿಜೆಪಿ ಸಹ ಪ್ರತಿಕ್ರಿಯಿಸಿದ್ದು, ಬಿಜೆಪಿ ವಕ್ತಾರ ಕೇಶವ್ ಉಪಾಧ್ಯಾಯ ಅವರು ಉದ್ಧವ್ ಠಾಕ್ರೆ ಉದ್ದೇಶಿಸಿ "ಕಾಂಗ್ರೆಸ್ ಮುಂದೆ ಮಂಡಿಯೂರಿ ಕುಳಿತಿದ್ದಾರೆ" ಎಂದು ಟೀಕಿಸಿದ್ದಾರೆ.