ಪಾಟ್ನಾ (ಬಿಹಾರ):ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಲೋಕಸಭೆ ಚುನಾವಣೆಯ ಮುನ್ನವೇ ಹಲವು ನಿರೀಕ್ಷೆಗಳಿಗೆ ಮನ್ನಣೆ ನೀಡಿದೆ'' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಾದಿಸಿದ್ದಾರೆ. ಮುಂಬೈನಿಂದ ಹಿಂದಿರುಗಿದ ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಜೆಡಿಯು ನಾಯಕ ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆ, ವಿರೋಧ ಕೂಟ 'ಇಂಡಿಯಾ'ವು ಇತ್ತೀಚೆಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿತ್ತು.
"ಈ ವಿಶೇಷ ಅಧಿವೇಶನವು ಚುನಾವಣೆಗಳ ಮುನ್ನ ಯೋಚಿಸುವುದರ ಸಂಕೇತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಅದರ ಸಾಧ್ಯತೆಯನ್ನು ನಾನು ಸ್ವಲ್ಪ ಸಮಯದಿಂದ ಗಮನಿಸುತ್ತಿದ್ದೇನೆ ಮತ್ತು ಹಂಚಿಕೊಳ್ಳುತ್ತಿದ್ದೇನೆ" ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಮುಂಗಾರು ಅಧಿವೇಶನದ ನಂತರ ಕಳೆದ ತಿಂಗಳು ಮುಂದೂಡಲ್ಪಟ್ಟ ಸಂಸತ್ತು ಸೆಪ್ಟೆಂಬರ್ 18 ರಿಂದ 22 ರವರೆಗೆ ವಿಶೇಷ ಅಧಿವೇಶನಕ್ಕಾಗಿ ಸಭೆ ಸೇರಲಿದೆ. ಅದರ ಕಾರ್ಯಸೂಚಿಯನ್ನು ಕೇಂದ್ರವು ಬಹಿರಂಗಗೊಳಿಸಿಲ್ಲ. ಲೋಕಸಭೆಯಲ್ಲಿ 16 ಸಂಸದರನ್ನು ಹೊಂದಿರುವ ಜೆಡಿಯು ನಾಯಕ, 'ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಆದರೆ, "ಮುಂಬರುವ ಅಧಿವೇಶನದಲ್ಲಿ ಬಲವಾಗಿ ಪ್ರಸ್ತಾಪಿಸಲಾಗುವ ಸಮಸ್ಯೆಗಳಿವೆ" ಎಂದು ಅವರು ಹೇಳಿದ್ದಾರೆ.