ನವದೆಹಲಿ:ದೆಹಲಿ ಮೇಲಿನ ಅಧಿಕಾರ ಚಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ವಿರೋಧಿಸುವ ಕುರಿತು ಕಾಂಗ್ರೆಸ್ ಹೊಂದಿದ್ದ ದ್ವಂದ್ವ ನಿಲುವು ಬಗೆಹರಿದಿದೆ. ಜುಲೈ 20 ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಸುಗ್ರೀವಾಜ್ಞೆಯನ್ನು ಪ್ರಶ್ನಿಸುವ ಕುರಿತು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನಿರ್ಣಯ ಕೈಗೊಂಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುಗ್ರೀವಾಜ್ಞೆ ವಿರೋಧಿಸಲು ಕಾಂಗ್ರೆಸ್ ಬೆಂಬಲವನ್ನು ಕೋರಿದ್ದರು. ಆದರೆ, ಪಕ್ಷದಲ್ಲೇ ಇದಕ್ಕೆ ವಿರೋಧವಿದ್ದ ಕಾರಣ ಈವರೆಗೂ ಯಾವುದೇ ಸ್ಪಷ್ಟ ನಿಲುವು ಕೈಗೊಂಡಿರಲಿಲ್ಲ. ಸುಗ್ರೀವಾಜ್ಞೆಗೆ ದೆಹಲಿ ಮತ್ತು ಪಂಜಾಬ್ ನಾಯಕರು ಪರವಾದ ಹೇಳಿಕೆ ನೀಡಿದ್ದರು. ಈ ವಿಚಾರದಲ್ಲಿ ಎಎಪಿಯನ್ನು ಬೆಂಬಲಿಸುವ ಬಗ್ಗೆ ವಿರೋಧ ವ್ಯಕ್ತವಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಎಐಸಿಸಿ ಹಿರಿಯ ನಾಯಕರೊಬ್ಬರು, ಮುಂಗಾರು ಅಧಿವೇಶನದಲ್ಲಿ ದೆಹಲಿ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸಲಿದೆ. ಚುನಾಯಿತ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಕೇಂದ್ರ ಸರ್ಕಾರದ ದಾಳಿಯ ವಿರುದ್ಧ ಕಾಂಗ್ರೆಸ್ ಹೋರಾಟವನ್ನು ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾತನಾಡಿ, ಒಕ್ಕೂಟ ವ್ಯವಸ್ಥೆಯ ಮೇಲಿನ ಇಂತಹ ದಾಳಿಗಳನ್ನು ನಾವು ಈ ಹಿಂದೆ ವಿರೋಧಿಸಿದ್ದೇವೆ. ಸಂಸತ್ತಿನ ಒಳಗೆ ಮತ್ತು ಹೊರಗೂ ವಿರೋಧಿಸಲಾಗುವುದು. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಮೋದಿ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಅವರು ಆಪಾದಿಸಿದರು.