ದೆಹಲಿ/ಬೆಂಗಳೂರು: ಇದೇ ಶನಿವಾರ ವರ್ಷದ ಕೊನೆಯ ಸೂರ್ಯಗ್ರಹಣ ಘಟಿಸಲಿದೆ. ಅಕ್ಟೋಬರ್ 14 ರಂದು ಸಂಭವಿಸಲಿರುವ ಈ ಗ್ರಹಣವು ಭಾರತ ಹೊರತುಪಡಿಸಿ ಪಶ್ಚಿಮ ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಸಾಗರ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಮೆಕ್ಸಿಕೊದಲ್ಲಿ ಕಂಡುಬರಲಿದೆ. ಇದೇ ತಿಂಗಳ ಕೊನೆಯಲ್ಲಿ ಚಂದ್ರಗ್ರಹಣವೂ ಸಂಭವಿಸಲಿದ್ದು ಆಕಾಶ ಎರಡು ವಿಶೇಷ ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ.
ಸೂರ್ಯಗ್ರಹಣ ಎಂದರೇನು?: ಸೂರ್ಯ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಖಗೋಳ ಪ್ರಕ್ರಿಯೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಈ ಸೂರ್ಯಗ್ರಹಣ ಆಗುತ್ತದೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬರುವುದರಿಂದ ಚಂದ್ರನು ಸೂರ್ಯನ ಕಿರಣಗಳನ್ನು ಭೂಮಿಯ ಮೇಲೆ ಬೀಳದಂತೆ ತಡೆಯುತ್ತಾನೆ. ಇದನ್ನೇ ಸೂರ್ಯಗ್ರಹಣ ಎನ್ನುವರು.
ಸೂರ್ಯಗ್ರಹಣದ ಸಮಯ: 2023ರ ಏಪ್ರಿಲ್ 20ರಂದು ಸೂರ್ಯಗ್ರಹಣ ಸಂಭವಿಸಿತ್ತು. ಅಕ್ಟೋಬರ್ 14ರಂದು ಸಂಭವಿಸುತ್ತಿರುವುದು ವರ್ಷದ ಎರಡನೇ ಸೂರ್ಯಗ್ರಹಣವಾಗಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:29ಕ್ಕೆ ಸೂರ್ಯಗ್ರಹಣ ಆರಂಭವಾಗಲಿದೆ. 11:34 PMಕ್ಕೆ ಮುಕ್ತಾಯವಾಗುತ್ತದೆ. ಕೇವಲ ಐದು ನಿಮಿಷಗಳ ಕಾಲ ಮಾತ್ರ ಸಂಪೂರ್ಣ ಸೂರ್ಯಗ್ರಹಣ ಇರುತ್ತದೆ. ಉಳಿದಂತೆ ಕೆಲ ಭಾಗಗಳಲ್ಲಿ ಗೋಚರಿಸಲಿದೆ.