ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೇಸ್ತೇನ್ ಹಮಾಸ್ ಉಗ್ರರ ನಡುವಿನ ಸಂಘರ್ಷ ಮುಂದುವರೆದಿದೆ. ಇಸ್ರೇಲ್ ಗಾಜಾ ಪಟ್ಟಿ ಮೇಲೆ ಪ್ರಬಲ ದಾಳಿಯನ್ನು ಮುಂದುವರೆಸಿದ್ದು, ಇಂದು ನೂರಾರು ಜನರು ಸಾವನ್ನಪ್ಪಿದ್ದಾರೆ. ಗಾಜಾ ಪಟ್ಟಿ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ ತಮ್ಮ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂದೀಪ್ ಪಾಂಡೆ, ಇಸ್ರೇಲ್ ದಾಳಿಗೆ ಅಮೆರಿಕ ಬೆಂಬಲಿಸಿರುವುದಕ್ಕೆ ನನಗೆ ನೀಡಲಾಗಿರುವ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಹಿಂತಿರುಗಿಸಲು ನಿರ್ಧರಿಸಿದ್ದೇನೆ. ಇದರ ಜೊತೆಗೆ ಅಮೆರಿಕದ ವಿಶ್ವ ವಿದ್ಯಾಲಯದಿಂದ ಪಡೆದಿರುವ ಎರಡು ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಹಿಂತಿರುಗಿಸುವುದಾಗಿ ಅವರು ಹೇಳಿದ್ದಾರೆ.
ರಾಕ್ಫೆಲ್ಲರ್ ಫೌಂಡೇಶನ್ ಎಂಬ ಸಂಸ್ಥೆಯು ಮ್ಯಾಗ್ಸೆಸ್ಸೆ ಪ್ರಶಸ್ತಿ ಮೊತ್ತವನ್ನು ನೀಡುತ್ತದೆ. ಸಂದೀಪ್ ಪಾಂಡೆ ಈ ಪ್ರಶಸ್ತಿ ಸ್ವೀಕರಿಸಿದ ವಿಭಾಗದ ಮೊತ್ತವನ್ನು ಫೋರ್ಡ್ ಫೌಂಡೇಶನ್ ಕೊಟ್ಟಿದೆ. ಈ ಎರಡೂ ಫೌಂಡೇಶನ್ಗಳು ಅಮೆರಿಕ ಮೂಲದ್ದಾಗಿವೆ. ಈಗ ಇಸ್ರೇಲ್ ದಾಳಿಗೆ ಅಮೆರಿಕ ಬೆಂಬಲ ಸೂಚಿಸಿದ್ದರಿಂದ ತಮ್ಮ ಪ್ರಶಸ್ತಿಯನ್ನು ವಾಪಸ್ ನೀಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಪ್ಯಾಲೇಸ್ತೇನ್ ಪ್ರಜೆಗಳ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕ ಬೆಂಬಲು ಸೂಚಿಸಿದೆ. ಇಸ್ರೇಲ್ ದಾಳಿಗೆ ಸುಮಾರು 21,500ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಸ್ರೇಲ್ ತನ್ನ ಶಸ್ತ್ರಾಸ್ತ್ರ ದಾಳಿಯನ್ನು ಮುಂದುವರೆಸಿದೆ ಎಂದು ತಿಳಿಸಿದ್ದಾರೆ. 2002ರಲ್ಲಿ ಸಂದೀಪ್ ಪಾಂಡೆ ಅವರಿಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ನೀಡಲಾಗಿತ್ತು. ಪಾಂಡೆ ಸೋಷಿಯಲಿಸ್ಟ್ ಪಾರ್ಟಿ(ಇಂಡಿಯಾ)ಯಲ್ಲಿ ಗುರುತಿಸಿಕೊಂಡಿದ್ದಾರೆ.