ಹೌರಾ(ಪಶ್ಚಿಮಬಂಗಾಳ):ರಾಮನವಮಿ ಮೆರವಣಿಗೆ ಮೇಲೆ ನಡೆದಿದ್ದ ದಾಳಿ ಬಳಿಕ ಪಶ್ಚಿಮಬಂಗಾಳದ ಹೌರಾ ಇನ್ನೂ ಶಾಂತವಾಗಿಲ್ಲ. ನಿನ್ನೆ ಕೂಡ ಮತ್ತೆ ಉದ್ರಿಕ್ತರು ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಸರ್ಕಾರ ಸಿಆರ್ಪಿಸಿ ಸೆಕ್ಷನ್ 144 ಜಾರಿ ಮಾಡಿದ್ದಲ್ಲದೇ, ಇಂದು ಮಧ್ಯರಾತ್ರಿ 2 ಗಂಟೆವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಬಿಹಾರದಲ್ಲೂ ಇದೇ ರೀತಿಯ ಘಟನೆ ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್ನಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ.
ಪಶ್ಚಿಮಬಂಗಾಳದ ಹೌರಾದಲ್ಲಿ ಕೆಲ ಉದ್ರಿಕ್ತರು ಶುಕ್ರವಾರ ಮಧ್ಯಾಹ್ನ ಮತ್ತೆ ರಸ್ತೆಗೆ ಇಳಿದು ಹಿಂಸಾಚಾರ ನಡೆಸಿದ್ದಾರೆ. ಪೊಲೀಸ್ ವಾಹನ, ಪತ್ರಕರ್ತರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಗುರುವಾರವಷ್ಟೇ ಈ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು. ಬಳಿಕ ಜನರ ಸಂಚಾರಕ್ಕೆ ಪ್ರದೇಶವನ್ನು ಮುಕ್ತ ಮಾಡಲಾಗಿತ್ತು. ಆದರೆ, ಕೆಲ ಗಲಭೆಕೋರರು ಮತ್ತೆ ಹಿಂಸಾಚಾರ ನಡೆಯುವಂತೆ ಮಾಡಿದ್ದಾರೆ.
ಗಲಭೆಯನ್ನು ತಡೆಯಲು ಸರ್ಕಾರ ತಕ್ಷಣಕ್ಕೆ ಜಾರಿಗೆ ಬರುವಂತೆ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದೆ. ಶನಿವಾರ ಮಧ್ಯರಾತ್ರಿ 2 ಗಂಟೆವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಹೌರಾ, ಶಿಬ್ಪುರ್, ಸಂತ್ರಗಾಚಿ, ದಾಸ್ನಗರ, ಸಾಲ್ಕಿಯಾ, ಮಾಲಿಪಂಚ್ಘೋರಾ ಮತ್ತು ಜಗಚಾ ಪ್ರದೇಶಗಳಲ್ಲಿ ಏಪ್ರಿಲ್ 1 ರಾತ್ರಿವರೆಗೂ ನಿಷೇಧವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಚೋದನಕಾರಿ ಸಂದೇಶಗಳು ಮತ್ತು ವಿಡಿಯೋಗಳ ಹರಿದಾಟ ನಿರ್ಬಂಧಿಸಲು ಟೆಲಿಕಾಂ, ಇಂಟರ್ನೆಟ್ ಮತ್ತು ಕೇಬಲ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿ ಸ್ಥಗಿತಕ್ಕೆ ಸೂಚಿಸಿದೆ. ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ತುರ್ತು ಪರಿಸ್ಥಿತಿ ಮುಂದುವರೆದಿದೆ. ಇದು ಸಾರ್ವಜನಿಕ ಶಾಂತಿಗಾಗಿ ತ್ವರಿತ ಕ್ರಮದ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.