ಮುಂಬೈ (ಮಹಾರಾಷ್ಟ್ರ): ಕೋವಿಡ್ 2ನೇ ಅಲೆಗೆ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಮುಂಬೈ ಹಾಟ್ಸ್ಪಾಟ್ ಆಗಿದೆ. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 2,624 ಹೊಸ ಕೊರೊನಾ ಕೇಸ್ಗಳು ಹಾಗೂ 78 ಸಾವು ಸೋಮವಾರ ವರದಿಯಾಗಿದ್ದು, ಐದು ವಾರಗಳ ಬಳಿಕ ನಗರದಲ್ಲಿ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ.
ಮಾರ್ಚ್ 17 ರಂದು 2,377 ಪ್ರಕರಣಗಳು ಪತ್ತೆಯಾಗಿದ್ದ ಮುಂಬೈನಲ್ಲಿ ಆನಂತರ ದೈನಂದಿನ ಸೋಂಕಿತರ ಸಂಖ್ಯೆ ಐದು ಸಾವಿರದವರೆಗೆ ಹೆಚ್ಚುತ್ತಲೇ ಹೋಗಿತ್ತು. ಇದೀಗ 5 ವಾರಗಳ ಬಳಿಕ ಹೊಸ ಕೇಸ್ಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಆದರೆ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಕೋವಿಡ್ ಪರೀಕ್ಷೆಗಳನ್ನೂ ಕಡಿಮೆ ಮಾಡಲಾಗಿದೆ. ಪ್ರತಿನಿತ್ಯ ಮುಂಬೈನ ಸುಮಾರು 50,000 ಮಂದಿಗೆ ಈವರೆಗೆ ಟೆಸ್ಟ್ ಮಾಡಲಾಗುತ್ತಿದ್ದು, ಭಾನುವಾರ ಕೇವಲ 38,000 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಮುಂಬೈನಲ್ಲಿ ಈವರೆಗೆ 6,58,621 ಕೇಸ್ಗಳು ಹಾಗೂ 13,372 ಸಾವು ವರದಿಯಾಗಿದೆ.