ಪೂರ್ವ ಗೋದಾವರಿ, ಆಂಧ್ರಪ್ರದೇಶ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಲ್ಲಜರ್ಲಾ ತಾಲೂಕಿನ ಅನಂತಪಲ್ಲಿ ಉಪನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಇತರರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪೊಲೀಸರು ಹೇಳುವುದೇನು?: ರಾಜಮಹೇಂದ್ರವರಂನ ಪ್ರಕಾಶನಗರದ 8 ಜನರು ಹೈದರಾಬಾದ್‌ನಲ್ಲಿ ಮದುವೆಯಲ್ಲಿ ಭಾಗವಹಿಸಿ ತಮ್ಮ ಊರಿಗೆ ಮರಳುತ್ತಿದ್ದರು. ಈ ಅನುಕ್ರಮದಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನಲ್ಲಜರ್ಲಾ ತಾಲೂಕಿನ ಅನಂತಪಳ್ಳಿಯ ಉಪನಗರದಲ್ಲಿ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಮಿಡ್ಡೆ ಸತ್ಯನಾರಾಯಣ (46), ಮಿಡ್ಡೆ ರವಿತೇಜ (24), ಮಿಡ್ಡೆ ಅರುಣ (26), ದಾಸರಿ ಶ್ರಾವಣಿ (26), ರೇಲಂಗಿ ಲಕ್ಷ್ಮಿ (50), ಲೋಹಿತ್ ಗಗನ್ (8) ಮತ್ತು ಆಟುಕುರಿ ದುರ್ಗಾ (50) ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಸಂಭವಿಸಿದ್ದಾಗ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ದುರ್ಗಾ ಎಂಬುವರು ಕೊವ್ವೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದರು. ಬಳಿಕ ಸ್ಥಳೀಯರು ಗಾಯಾಳುಗಳನ್ನು ರಾಜಮಹೇಂದ್ರವರಂ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತಕ್ಕೀಡಾದ ಏಳು ಜನರಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಕೊವ್ವೂರು ಡಿಎಸ್ಪಿ ವರ್ಮಾ ತಿಳಿಸಿದ್ದಾರೆ.
ಓದಿ:ಶವ ಕೊಂಡೊಯ್ಯುವಾಗ ನಿಂತ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ.. ಚಿತ್ರದುರ್ಗದ ಬಳಿ ಮೂವರು ಸಾವು!
ಅಪಘಾತದಲ್ಲಿ ಆಂಧ್ರದ ಐವರು ಸಾವು: ಕಳೆದ ಮಂಗಳವಾರದಂದು ಯಾದಗಿರಿ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲ ಈ ಅಪಘಾತದಲ್ಲಿ 13 ಜನ ಗಾಯಗೊಂಡಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಮೃತರನ್ನು ಮುನೀರ್ (40), ನಯಮ್ತ್ ಉಲ್ಲಾ (40), ಮೀಜಾ (50), ಮುದ್ದಸಿರ್ (12) ಮತ್ತು ಸುಮ್ಮಿ (13) ಎಂದು ಗುರುತಿಸಲಾಗಿತ್ತು. ಇವರು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ವೇಲಗೋಡು ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದ್ದು, ಕಲಬುರುಗಿಯಲ್ಲಿ ನಡೆಯುತ್ತಿರುವ ದರ್ಗಾ ಉರುಸ್ ಜಾತ್ರೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿತ್ತು. ಈ ವೇಳೆ, ನಿಂತಿದ್ದ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ವಾಹನದಲ್ಲಿ ಸುಮಾರು 18 ಜನರು ಪ್ರಯಾಣಿಸುತ್ತಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸುತ್ತಿದ್ದ ಕೂಡಲೇ ಸ್ಥಳೀಯರು ಮತ್ತು ವಾಹನ ಸವಾರರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ವಾಹನದಲ್ಲಿದ್ದ ಗಾಯಾಳುಗಳ ಆರೈಕೆ ಮಾಡಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಕೈಗೊಂಡಿದ್ದರು. ವಾಹನದಿಂದ ಮೃತದೇಹಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.
ಇನ್ನು ಆಯಿಷಾ, ಅನಸ್, ಸುಹಾನಾ, ರಮೀಜಾ, ಮಸಿ ಉಲ್ಲಾ, ಸೀಮಾ, ರಿಯಾಜ್ ಉನ್ಬೀ, ಮುಜ್ಜು, ನಸೀಮಾ, ಮಾಶುಮ್ ಬಾಷಾ, ಮುಜಕೀರ್, ಹನೀಫಾ, ಸೋಹೆಲ್ ಸೇರಿದಂತೆ 13 ಜನರು ಗಾಯಗೊಂಡಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನೆಲ್ಲ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚೇತರಿಸಿಕೊಂಡ ಇವರು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದರು.