ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದ್ದು, ಈ ವೇಳೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಭಯೋತ್ಪಾದಕರನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಮೊರಿಫತ್ ಮಕ್ಬೂಲ್ ಮತ್ತು ಜಾಜಿಮ್ ಫಾರೂಕ್ ಅಲಿಯಾಸ್ ಅಬ್ರಾರ್ ಎಂದು ಗುರುತಿಸಲಾಗಿದೆ. ಅಬ್ರಾರ್ ಕಾಶ್ಮೀರಿ ಪಂಡಿತ್ ದಿವಂಗತ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಕಾಶ್ಮೀರ ಎಡಿಜಿಪಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕಾಶ್ಮೀರ ಪೊಲೀಸ್ ಟ್ವೀಟ್ ಮಾಡಿ, "ಶೋಪಿಯಾನ್ ಜಿಲ್ಲೆಯ ಅಲ್ಶಿಪೋರಾ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಉಗ್ರರನ್ನು ಮಟ್ಟ ಹಾಕಲು ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿತ್ತು.
ಶೋಪಿಯಾನ್ ಜಿಲ್ಲೆಯ ಅಲ್ಶಿಪೋರಾ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಜಮ್ಮು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮತ್ತು ಭಾರತೀಯ ಸೇನೆ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆ ಪ್ರಾರಂಭಿಸಿದೆ. ಉಗ್ರರು ಅಡಗಿಕೊಂಡಿದ್ದ ಪ್ರದೇಶವನ್ನು ಸುತ್ತುವರೆದ ಭಾರತೀಯ ಸೇನೆ ಮತ್ತು ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.