ನವದೆಹಲಿ: ನಾನೂ ಈಗಲೂ ಎನ್ಸಿಪಿಯ ಅಧ್ಯಕ್ಷ. ನನಗೆ 82 ಅಥವಾ 92 ವರ್ಷಗಳೇ ಆಗಿರಲಿ ಏನೀಗ. ನಾನು ಈಗಲೂ ಸಮರ್ಥನಾಗಿದ್ದೇನೆ ಎಂದು ಹೇಳುವ ಮೂಲಕ ಶರದ್ ಪವಾರ್, ತಮ್ಮ ಸಹೋದರನ ಮಗ ಅಜಿತ್ ಪವಾರ್ಗೆ ತಿರುಗೇಟು ನೀಡಿದ್ದಾರೆ.
ಪಕ್ಷ ಇಬ್ಭಾಗವಾಗಿದ್ದು, ತಮ್ಮದೇ ನಿಜವಾದ ಪಕ್ಷ ಎಂದು ಅಜಿತ್ ಪವಾರ್ ಹೇಳಿಕೊಳ್ಳುತ್ತಿರುವ ಬೆನ್ನಲೇ, ಶರದ್ ಪವಾರ್ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದರು. ಈ ಸಭೆಯ ಬಳಿಕ ಮಾತನಾಡಿದ ಪವಾರ್, ನಾನೇ ಈಗಲೂ ಪಕ್ಷದ ರಾಷ್ಟ್ರಾಧ್ಯಕ್ಷ ಎಂದು ಘೋಷಿಸಿದರು. ಮುಂದುವರೆದು ಮಾತನಾಡಿದ ಅವರು, ಅಜಿತ್ ಪವಾರ್ ಅವರನ್ನು ಬೆಂಬಲಿಸುವ ಬಹುಪಾಲು ಶಾಸಕರ ಹೂರಣ ಶೀಘ್ರವೇ ಹೊರಬರಲಿದೆ ಎಂದರು. ಇನ್ನು ಎನ್‌ಸಿಪಿ ಸಭೆಯಲ್ಲಿ, ಎನ್‌ಡಿಎ ಜೊತೆ ಕೈಜೋಡಿಸಿರುವ ಪ್ರಫುಲ್ ಪಟೇಲ್, ಸುನೀಲ್ ತಟ್ಕರೆ ಮತ್ತು ಇತರ ಒಂಬತ್ತು ಮಂದಿಯನ್ನು ಉಚ್ಚಾಟಿಸುವ ನಿರ್ಧಾರವನ್ನು ಅನುಮೋದಿಸಲಾಯಿತು.
ಎನ್‌ಸಿಪಿ ಕಾರ್ಯಕಾರಿ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳೇನು?:ಎನ್ಸಿಪಿಯ ಈಸಭೆಯಲ್ಲಿ ಎಂಟು ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಪಕ್ಷದ ನಾಯಕ ಪಿ ಸಿ ಚಾಕೊ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಜಿತ್ ಪವಾರ್ ಅವರು ತಮಗೆ ಬಹುಮತ ಇದೆ ಎಂಬುದಾಗಿ ಹೇಳಿಕೊಂಡಿದ್ದು, ಆ ಬಗೆಗಿನ ಸತ್ಯ ಶೀಘ್ರದಲ್ಲೇ ಹೊರ ಬರಲಿದೆ ಎಂದು ಪವಾರ್ ಹೇಳಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು. "ಎನ್‌ಡಿಎ ಜೊತೆ ಕೈಜೋಡಿಸಿರುವ ಪ್ರಫುಲ್ ಪಟೇಲ್, ಸುನೀಲ್ ತಾಟ್ಕರೆ ಮತ್ತು ಒಂಬತ್ತು ಮಂದಿಯನ್ನು ಉಚ್ಚಾಟಿಸುವ ನಿರ್ಧಾರವನ್ನು ಎನ್‌ಸಿಪಿ ಕಾರ್ಯಕಾರಿ ಸಮಿತಿ ಅನುಮೋದಿಸಿದೆ. ಶರದ್ ಪವಾರ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರೇ ಮುಂದುವರೆಯಲಿದ್ದಾರೆ. ಇದೇ ವೇಳೆ, ಅಜಿತ್ ಪವಾರ್ ತಾವೇ ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಪಿ ಸಿ ಚಾಕೋ ಹೇಳಿದ್ದಾರೆ.