ಕುಶಿನಗರ(ಉತ್ತರ ಪ್ರದೇಶ): ನೇಪಾಳದ ಜನಕ್‌ಪುರ ಮಾರ್ಗವಾಗಿ ಅಯೋಧ್ಯೆಗೆ ಶಾಲಿಗ್ರಾಮ ಕಲ್ಲುಗಳು ಸಾಗಿಸುತ್ತಿರುವ ವಾಹನಗಳು ನಿನ್ನೆ(ಮಂಗಳವಾರ) ಉತ್ತರ ಪ್ರದೇಶದ ಕುಶಿನಗರ ತಲುಪಿವೆ. ಇಲ್ಲಿ ಬಂಡೆಗಳಿಗೆ 32 ಮಂದಿ ಪುರೋಹಿತರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಇಡೀ ಪ್ರದೇಶ ಜೈ ಶ್ರೀ ರಾಮ್ ಘೋಷಣೆಗಳೊಂದಿಗೆ ಪ್ರತಿಧ್ವನಿಸಿತು.
ಸಂಸ್ಕೃತ ಪಾಠಶಾಲೆಯಿಂದ ಬಂದ 11 ಮಂದಿ ಪಂಡಿತರು ಶಾಲಿಗ್ರಾಮ ಶಿಲೆಯ ಆಗಮನದ ವೇಳೆ ಮಂತ್ರ ಪಠಿಸಿದರು. ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಡಿತರು ಮತ್ತು ಭಕ್ತರು ಭಾಗವಹಿಸಿದ್ದರು. ಪೂಜೆಯ ನಂತರ ಪ್ರಸಾದ ವಿತರಿಸಲಾಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
60 ಮಿಲಿಯನ್ ವರ್ಷಗಳಷ್ಟು ಹಳೆಯ ಶಿಲೆ: ಶಾಲಿಗ್ರಾಮ ಕಲ್ಲುಗಳನ್ನು ನೇಪಾಳದ ಪೋಖರಾದಲ್ಲಿ ಹುಟ್ಟುವ ಗಂಡಕ್ ನದಿಯಿಂದ ಹೊರತೆಗೆಯಲಾಗಿದೆ. ಈ ನದಿಯನ್ನು 'ಶಾಲಿಗ್ರಾಮ ನದಿ' ಎಂದೂ ಕರೆಯುತ್ತಾರೆ. ಕಲ್ಲುಗಳು 60 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ತಜ್ಞರು ಹೇಳಿದ್ದಾರೆ. ನದಿಯಿಂದ ಎರಡು ಬೃಹತ್ ಗಾತ್ರದ ಕಲ್ಲುಗಳನ್ನು ಹೊರತೆಗೆದ ಬಳಿಕ ಪೂಜೆ ಸಲ್ಲಿಸಲಾಗಿದೆ. ಬಳಿಕ ಸೀತಾ ಮಾತೆಯ ಜನ್ಮಸ್ಥಳವಾದ ಜನಕ್‌ಪುರದ ಮೂಲಕ ದೊಡ್ಡ ಟ್ರಕ್ (ಕಂಟೇನರ್) ಮೂಲಕ ಭಾರತಕ್ಕೆ ತರಲಾಗುತ್ತಿದೆ.
ರಾಮ ಮತ್ತು ಸೀತೆಯ ವಿಗ್ರಹ:ನೇಪಾಳದ ಪೋಖರಾದಿಂದ ತರಲಾಗುತ್ತಿರುವ ಈ ಎರಡು ಶಿಲೆಗಳನ್ನು ಕೆತ್ತಿ ಭಗವಾನ್ ರಾಮ ಮತ್ತು ಸೀತೆಯ ವಿಗ್ರಹಗಳನ್ನು ತಯಾರಿಸಲಾಗುವುದು. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಇದನ್ನು ಸ್ಥಾಪಿಸಲಾಗುವುದು.
ವರದಿಗಳ ಪ್ರಕಾರ ಜ.26ರಿಂದಲೇ ಶಾಲಿಗ್ರಾಮ ಶಿಲೆ ತರುವ ಯಾತ್ರೆ ಆರಂಭವಾಗಿದೆ. ನೇಪಾಳದ ಮೂಲಕ ಬಿಹಾರಕ್ಕೆ ಶಾಲಿಗ್ರಾಮ ಕಲ್ಲುಗಳನ್ನು ಸಾಗಿಸಲಾಗುತ್ತಿದೆ. ಮಂಗಳವಾರ ಉತ್ತರ ಪ್ರದೇಶದ ಕುಶಿನಗರವನ್ನು ತಲುಪಿವೆ. ಉತ್ತರ ಪ್ರದೇಶದ ನಾಲ್ಕು ಜಿಲ್ಲೆಗಳ ಗಡಿಯ ಮೂಲಕ ಹಾದು ಅಯೋಧ್ಯೆ ತಲುಪಲಿದೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದಲ್ಲಿ ನೇಪಾಳದಿಂದ ತರಿಸಲಾದ ಶಾಲಿಗ್ರಾಮ ಕಲ್ಲುಗಳಿಂದ ವಿಗ್ರಹ ನಿರ್ಮಾಣ ಮಾಡಬೇಕಿದೆ.
ಫೆ.2ಕ್ಕೆ ಅಯೋಧ್ಯೆಗೆ: ಕಂಟೈನರ್ಗಳ ಮೂಲಕ 60 ಮಿಲಿಯನ್ ವರ್ಷಗಳಿಗಿಂತಲೂ ಹಳೆಯದಾದ ಎರಡು ದೊಡ್ಡ ಶಾಲಿಗ್ರಾಮ ಕಲ್ಲುಗಳನ್ನು ನೇಪಾಳದಿಂದ ಬಿಹಾರದ ಮೂಲಕ ಉತ್ತರ ಪ್ರದೇಶಕ್ಕೆ ತರಲಾಗುತ್ತಿದೆ. ನೇಪಾಳ ಗಡಿಯಿಂದ ತರಲಾಗುತ್ತಿರುವ ಎರಡು ಕಲ್ಲುಗಳಲ್ಲಿ ಒಂದರ ತೂಕ 26 ಟನ್ ಮತ್ತು ಇನ್ನೊಂದು 14 ಟನ್ ಎಂದು ಹೇಳಲಾಗಿದೆ. ನೇಪಾಳ ಗಡಿಯಿಂದ ಬಿಹಾರದ ಮೂಲಕ ಎರಡು ದಿನ ಕ್ರಮಬದ್ಧವಾಗಿ ಪೂಜೆ ಸಲ್ಲಿಸಿ ಕಲ್ಲುಗಳನ್ನು ತೆಗೆದಿದ್ದಾರೆ. ಫೆಬ್ರವರಿ 2ಕ್ಕೆ ಕಲ್ಲುಗಳು ಅಯೋಧ್ಯೆಗೆ ತಲುಪಲಿವೆ ಎಂದು ತಿಳಿದು ಬಂದಿದೆ.
ಶಾಲಿಗ್ರಾಮ ಶಿಲೆಯ ಪ್ರಾಮುಖ್ಯತೆ ಏನು?: ವೈಜ್ಞಾನಿಕವಾಗಿ ಶಾಲಿಗ್ರಾಮ ಒಂದು ರೀತಿಯ ಪಳೆಯುಳಿಕೆ ಕಲ್ಲು. ಧಾರ್ಮಿಕ ಆಧಾರದ ಮೇಲೆ ಇದನ್ನು ಪರಮಾತ್ಮನ ಪ್ರತಿನಿಧಿಯಾಗಿ ಭಗವಂತನನ್ನು ಆವಾಹಿಸಲು ಬಳಸಲಾಗುತ್ತದೆ. ಶಾಲಿಗ್ರಾಮ ಕಲ್ಲುಗಳನ್ನು ಸಾಮಾನ್ಯವಾಗಿ ಪವಿತ್ರ ನದಿಯ ಕೆಳಭಾಗದಿಂದ ಅಥವಾ ದಡದಿಂದ ಸಂಗ್ರಹಿಸಲಾಗುತ್ತದೆ. ವೈಷ್ಣವರು (ಹಿಂದೂಗಳು) ವಿಷ್ಣುವಿನ ಪ್ರತಿನಿಧಿಯಾಗಿ ಪವಿತ್ರ ನದಿಯಾದ ಗಂಡಕಿಯಲ್ಲಿ ಕಂಡು ಬರುವ ಗೋಲಾಕಾರದ, ಕಪ್ಪು ಬಣ್ಣದ ಅಮೋನಾಯ್ಡ್ ಪಳೆಯುಳಿಕೆಯನ್ನು ಪೂಜಿಸುತ್ತಾರೆ. ಶಾಲಿಗ್ರಾಮ ವಿಷ್ಣುವಿನ ಪ್ರಸಿದ್ಧ ಹೆಸರು.
ಡಿಸೆಂಬರ್‌ನಲ್ಲಿ ಅನುಮೋದನೆ: ಶಿಲೆಗಳನ್ನು ನೀಡಲು ನೇಪಾಳ ಸರ್ಕಾರ ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ನೇಪಾಳದ ಮಾಜಿ ಉಪಪ್ರಧಾನಿ ಅಯೋಧ್ಯೆಗೆ ಈ ಪವಿತ್ರ ಕಲ್ಲುಗಳನ್ನು ಕಳುಹಿಸುವ ಬಗ್ಗೆ ಮಾತನಾಡಿದ್ದಾರೆ. 'ನಾನು ಜಾನಕಿ ದೇವಸ್ಥಾನದ ಮಹಂತ್ ಮತ್ತು ನನ್ನ ಸಹೋದ್ಯೋಗಿ ರಾಮ್ ತಾಪೇಶ್ವರ ದಾಸ್ ಅವರೊಂದಿಗೆ ಅಯೋಧ್ಯೆಗೆ ಹೋಗಿದ್ದೆ. ನಾವು ಟ್ರಸ್ಟ್‌ನ ಅಧಿಕಾರಿಗಳು ಮತ್ತು ಅಯೋಧ್ಯೆಯ ಇತರ ಸಂತರೊಂದಿಗೆ ಸಭೆ ನಡೆಸಿದ್ದೇವೆ. ನೇಪಾಳದ ಗಂಡಕಿ ನದಿಯಲ್ಲಿ ಕಲ್ಲುಗಳು ಲಭ್ಯವಿದ್ದರೆ ಅದರಿಂದಲೇ ರಾಮಲಾಲ ವಿಗ್ರಹವನ್ನು ತಯಾರಿಸುವುದು ಒಳ್ಳೆಯದು ಎಂದು ನಿರ್ಧರಿಸಲಾಯಿತು' ಎಂದಿದ್ದಾರೆ.
ಇದನ್ನೂ ಓದಿ:ಗೋರಖ್ಪುರ ಪ್ರವೇಶಿಸಿದ ಶ್ರೀರಾಮ ಮಂದಿರ ಶಾಲಿಗ್ರಾಮ ಬಂಡೆಗಳು: ನಾಳೆ ಅಯೋಧ್ಯೆಯತ್ತ ಪಯಣ