ಲಖನೌ: 2017 ರ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋದ ವಿಶೇಷ NIA ನ್ಯಾಯಾಲಯವು ಏಳು ಭಯೋತ್ಪಾದಕರಿಗೆ ಮರಣದಂಡನೆ ಮತ್ತು ಒಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನಿಷೇಧಿತ ಐಎಸ್ ಸಂಘಟನೆಯ ಭಯೋತ್ಪಾದಕ ಮೊಹಮ್ಮದ್ ಫೈಸಲ್, ಆಸಿಫ್ ಇಕ್ಬಾಲ್ ಅಲಿಯಾಸ್ ರಾಕಿ, ಸೈಯದ್ ಮೀರ್ ಹುಸೇನ್, ಮೊಹಮ್ಮದ್ ದಾನಿಶ್, ಅತೀಫ್ ಮುಜಾಫರ್, ಮೊಹಮ್ಮದ್ ಅಜರ್, ಗೌಸ್ ಮೊಹಮ್ಮದ್ ಖಾನ್ ಮರಣದಂಡನೆ ನೀಡಲಾಗಿದೆ. ಅತೀಫ್ ಅಲಿಯಾಸ್ ಜುರಾನ್ ಆತಿಫ್ ಇರಾನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ತೀರ್ಪು ನೀಡುವ ವೇಳೆ ಐಎಸ್ ಸಂಘಟನೆಯ ಎಂಟು ಭಯೋತ್ಪಾದಕರು ನ್ಯಾಯಾಲಯದಲ್ಲಿ ಹಾಜರಿದ್ದರು. ರಾತ್ರಿ 8 ಗಂಟೆಗೆ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. ರೈಲು ಸ್ಫೋಟದಲ್ಲಿ ಒಂಬತ್ತು ಮಂದಿ ಉಗ್ರರು ಭಾಗಿಯಾಗಿದ್ದರು. ಸೈಫುಲ್ಲಾ ಎಂಬಾತ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.