ಚೆನ್ನೈ(ತಮಿಳುನಾಡು):ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕೆ ಧ್ಯಾನ್ ಚಂದ್ ಖೇಲ್ ರತ್ನ ಪುರಸ್ಕಾರ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಭಾರತೀಯ ಹಾಕಿ ತಂಡದ ಮಾಜಿ ನಾಯಕ ಮೊಹಮದ್ ರಿಯಾಜ್ ಸ್ವಾಗತಿಸಿದ್ದಾರೆ.
ಚೆನ್ನೈ ಮೂಲದವರಾದ ರಿಯಾಜ್ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕೆ ಹೆಸರು ಬದಲಾವಣೆ ಸ್ವಾಗತಾರ್ಹವಾಗಿದ್ದು, ಧ್ಯಾನ್ ಚಂದ್ ಹೆಸರಲ್ಲಿ ಪ್ರತ್ಯೇಕ ಪ್ರಶಸ್ತಿ ನೀಡಿದ್ದರೆ ತುಂಬಾ ಅನುಕೂಲಕರವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊಹಮದ್ ರಿಯಾಜ್ ಎರಡು ಬಾರಿ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಎರಡು ಬಾರಿ ಭಾರತೀಯ ತಂಡನನ್ನು ಪ್ರತಿನಿಧಿಸಿದ್ದಾರೆ. ಕ್ರೀಡಾಳುಗಳಿಗೆ ನೀಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯೂ ಅವರಿಗೆ ಸಂದಿದೆ.ಲಂಡನ್ ಒಲಿಂಪಿಕ್ಸ್ ವೇಳೆ ಭಾರತದ ಕೋಚ್ ಆಗಿಯೂ ರಿಯಾಜ್ ಕಾರ್ಯನಿರ್ವಹಿಸಿದ್ದಾರೆ.
ರಾಜೀವ್ ಗಾಂಧಿ ದೇಶದ ಮಹಾನ್ ಪ್ರಧಾನಿಯಾಗಿದ್ದರು ಮತ್ತು ಧ್ಯಾನ್ ಚಂದ್ ಒಬ್ಬ ಲೆಜೆಂಡ್ ಕ್ರೀಡಾಪಟು. ಧ್ಯಾನ್ ಚಂದ್ ಮೈದಾನದಲ್ಲಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಅಡಾಲ್ಫ್ ಹಿಟ್ಲರ್ ತನ್ನ ದೇಶಕ್ಕಾಗಿ ಆಡಲು ಧ್ಯಾನ್ ಚಂದ್ ಅವರಿಗೆ ಜರ್ಮನ್ ಪೌರತ್ವ ನೀಡಲು ಮುಂದಾಗಿದ್ದರು. ಆದರೆ ಧ್ಯಾನ್ ಚಂದ್ ಅವರು ಅದನ್ನು ನಿರಾಕರಿಸಿ ದೇಶಕ್ಕಾಗಿ ಆಡಿದರು. ಅವರ ಗೌರವಾರ್ಥವಾಗಿ ಪ್ರತ್ಯೇಕ ಪ್ರಶಸ್ತಿಯನ್ನು ಸ್ಥಾಪಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ರಿಯಾಜ್ ಅವರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:Video- ಹಣ ಕದಿಯಲು ಬಂದು ಎಟಿಎಂ ಹಿಂದೆ ಅವಿತುಕೊಂಡ ಖದೀಮ.. ಮುಂದಾಗಿದ್ದೇನು?
1968ರ ಮೆಕ್ಸಿಕೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ ತಂಡದ ಭಾಗವಾಗಿದ್ದ ಚೆನ್ನೈ ಮೂಲದ ಇನ್ನೊಬ್ಬ ಒಲಿಂಪಿಯನ್ ಮುನೀರ್ ಸೇಟ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ರಾಜಕೀಯ ನಿರ್ಧಾರ ಎಂದಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಕೂಡಾ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕೆ ಮರುನಾಮಕರಣ ಮಾಡುವ ಕೇಂದ್ರದ ನಿರ್ಧಾರವನ್ನು ಖಂಡಿಸಿದ್ದು, ಇದೊಂದು ಕ್ಷುಲ್ಲಕ ರಾಜಕೀಯದ ಕೃತ್ಯ ಎಂದು ಆರೋಪಿಸಿದೆ. ಟಿಎನ್ಸಿಸಿ ಅಧ್ಯಕ್ಷ ಕೆ.ಎಸ್. ಆಳಗಿರಿ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.