ನವದೆಹಲಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಿಡುಗಡೆಗೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ಕುರಿತು ಮದ್ರಾಸ್ ಹೈಕೋರ್ಟ್ ವಿಭಿನ್ನ ತೀರ್ಪು ನೀಡಿದೆ. ಇದೇ ವೇಳೆ, ಅರ್ಜಿ ವಿಚಾರಣೆಗೆ ಶೀಘ್ರವಾಗಿ ಮೂವರು ನ್ಯಾಯಮೂರ್ತಿಗಳ ಪೀಠ ರಚಿಸುವಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಹೊಸ ನ್ಯಾಯಮೂರ್ತಿಗಳು ಸಾಧ್ಯವಾದಷ್ಟು ಬೇಗ ಅರ್ಜಿಯನ್ನು ನಿರ್ಧರಿಸಬಹುದು ಎಂದು ಸುಪ್ರೀಂ ಹೇಳಿದೆ.
ಮಾಜಿ ಸಿಎಂ ದಿ. ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ನಡೆದ ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಮೇಲೆ ಜೂನ್ 14ರಂದು ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಸದ್ಯ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದಲ್ಲಿ ಸಚಿವರಾಗಿರುವ ಸೆಂಥಿಲ್ ಬಾಲಾಜಿ ಅವರದ್ದು ''ಅಕ್ರಮ ಬಂಧನ'' ಎಂದು ಆರೋಪಿಸಿ ಪತ್ನಿ ಮದ್ರಾಸ್ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಇಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ. ನಿಶಾ ಬಾನು ಮತ್ತು ಡಿ. ಭರತ ಚಕ್ರವರ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಭಿನ್ನ ತೀರ್ಪು ಪ್ರಕಟಿಸಿತು. ಅಲ್ಲದೇ, ಈ ವಿಷಯವನ್ನು ತ್ರಿಸದಸ್ಯ ಪೀಠಕ್ಕೆ ನಿಯೋಜಿಸಲು ಮುಖ್ಯ ನ್ಯಾಯಾಧೀಶರ ಮುಂದೆ ಪ್ರಕರಣವನ್ನು ಇರಿಸುವಂತೆ ಪೀಠವು ಕೋರಿದೆ.
ಇದನ್ನೂ ಓದಿ:ಸಚಿವ ಸಂಪುಟದಿಂದ ಸೆಂಥಿಲ್ ಬಾಲಾಜಿ ವಜಾ ಆದೇಶ ಹಿಂಪಡೆಯಲು ನಿರ್ಧರಿಸಿದ ರಾಜ್ಯಪಾಲರು
ಮತ್ತೊಂಡೆದೆ, ಸುಪ್ರೀಂ ಕೋರ್ಟ್ನಲ್ಲಿ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೈಕೋರ್ಟ್‌ನಿಂದ ವಿಭಿನ್ನ ತೀರ್ಪು ಪ್ರಕಟವಾಗಿರುವುದರಿಂದ ಅಂತಿಮ ತೀರ್ಪಿಗಾಗಿ ಈ ವಿಷಯವನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠದ ತಮ್ಮ ವಾದ ಮಂಡಿಸಿ, ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು, ಪ್ರಕರಣದ ಸಾಕ್ಷ್ಯಾಧಾರಗಳನ್ನು ತಿರುಚುವ ಕುರಿತು ಆತಂಕ ವ್ಯಕ್ತಪಡಿಸಿದರು.
ಅಲ್ಲದೇ, ಮತ್ತೊಂದು ಪೀಠ ರಚನೆಯಾಗುವವರೆಗೆ ಕಾಯುವ ಬದಲು ಈ ನ್ಯಾಯಾಲಯವು ನಿರ್ಧರಿಸಬಹುದಾದ ಕಾನೂನಿನ ಪ್ರಶ್ನೆಗಳಿವೆ ಎಂದು ತುಷಾರ್ ಮೆಹ್ತಾ ಹೇಳಿದರು. ಈ ವೇಳೆ ಸಚಿವ ಸೆಂಥಿಲ್ ಬಾಲಾಜಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಹೈಕೋರ್ಟ್ ಅನ್ನು ಈ ರೀತಿ ಬೈಪಾಸ್ ಮಾಡುವುದು ಹೇಗೆ?. ಹೈಕೋರ್ಟ್ ಮೊದಲು ಪರಿಗಣಿಸಬೇಕು. ಈಗ ವಿಭಿನ್ನ ತೀರ್ಪು ಬಂದಿದೆ. ಆದ್ದರಿಂದ ವಿಚಾರಣೆ ಉನ್ನತ ಪೀಠಕ್ಕೆ ಹೋಗಬೇಕಾಗಿದೆ ಎಂದು ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರ್ಧರಿಸಬೇಕೆಂಬ ಮೆಹ್ತಾ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಇದರಿಂದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಆದಷ್ಟು ಬೇಗ ತ್ರಿ ಸದಸ್ಯ ಪೀಠಕ್ಕೆ ರಚನೆಗೆ ನಿರ್ದೇಶಿಸಿತು. ಜೊತೆಗೆ ಸಾಧ್ಯವಾದಷ್ಟು ಬೇಗ ಪ್ರಕರಣವನ್ನು ನಿರ್ಧರಿಸಲು ಸೂಚಿಸಿತ್ತು. ಇದೇ ವೇಳೆ, ತನ್ನ ಮುಂದಿರುವ ಅರ್ಜಿಯ ಹೈಕೋರ್ಟ್‌ನ ವಿಚಾರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿ, ಜುಲೈ 24ರಂದು ಪ್ರಕರಣದ ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ED Raid: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಕಚೇರಿ, ಮನೆಗಳ ಮೇಲೆ ಇಡಿ ಶೋಧ; ಕೇಂದ್ರದ ವಿರುದ್ಧ ಸಿಎಂ ಸ್ಟಾಲಿನ್ ಆಕ್ರೋಶ