ಬಾಲಾಕೋಟ್(ಜಮ್ಮು ಮತ್ತು ಕಾಶ್ಮೀರ): ಪೂಂಚ್ ಜಿಲ್ಲೆಯ ಬಾಲಾಕೋಟ್ ಸೆಕ್ಟರ್‌ನ ಗಡಿ ರೇಖೆಯಲ್ಲಿ ಸೋಮವಾರ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ. ನುಸುಳುಕೋರರಿಂದ ಭದ್ರತಾ ಪಡೆಗಳು ಒಂದು ಎಕೆ 47, ಎರಡು ಮ್ಯಾಗಜೀನ್‌ಗಳು, 30 ರೌಂಡ್‌ಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಪಾಕಿಸ್ತಾನ ಮೂಲದ ಔಷಧ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಭಾರತೀಯ ಸೈನ್ಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿ ಆಗಿದೆ. ಬಾಲಾಕೋಟ್ ವಲಯದಿಂದ ಭಯೋತ್ಪಾದಕರು ಒಳ ನುಸುಳಲು ಎಲ್‌ಒಸಿ ಬಳಿ ತಯಾರಾಗುತ್ತಿರುವುದನ್ನು ಗಮನಿಸಿ ಅಲ್ಲಿನ ಪೊಲೀಸರು ಸೇನೆಗೆ ಮಾಹಿತಿ ನೀಡಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಉಗ್ರರ ಮೇಲೆ ಸೇನೆ ಗುರಿ ಇಟ್ಟಿತ್ತು. ಹಮೀರ್‌ಪುರ ಪ್ರದೇಶದಲ್ಲಿ ಈ ಇಬ್ಬರು ಭಯೋತ್ಪಾದಕರು ಒಳ ನುಸುಳಲು ಕಾದು ಕುಳಿತಿದ್ದರು. ಪ್ರತಿಕೂಲ ಹವಾಮಾನಕ್ಕಾಗಿ ಇವರು ಎದುರು ನೋಡುತ್ತಿದ್ದರು. ಇದನ್ನು ಗಮನಿಸಿದ ಸೇನೆ ಇವರ ಮೇಲೆ ದಾಳಿ ಮಾಡಿ ಕಥೆ ಮುಗಿಸಿದೆ.
ಭದ್ರತಾ ಪಡೆ ಗುಂಡಿನ ದಾಳಿ ವೇಳೆ ಇಬ್ಬರು ಹತರಾದರೆ, ಇನ್ನಿಬ್ಬರು ಪ್ರತಿ ದಾಳಿ ನಡೆಸಲು ಸಾಧ್ಯವಾಗದೇ ಪರಾರಿಯಾಗಿದ್ದಾರೆ. ಮೊದಲು ಸೇನೆಯ ದಾಳಿಯಲ್ಲಿ ಒಬ್ಬ ಉಗ್ರ ಸ್ಥಳದಲ್ಲೇ ಹತನಾದರೆ, ಇನ್ನೊಬ್ಬ ಎಲ್‌ಒಸಿಯಿಂದ ಓಡಿ ಹೋಗುವ ಯತ್ನ ಮಾಡಿದ್ದ. ಆದರೆ ಸೇನೆಯ ಗುಂಡಿನಿಂದ ತಪ್ಪಿಸಿಕೊಳ್ಳಲಾಗದೇ, ಮೃತಪಟ್ಟಿದ್ದಾನೆ ಎಂದು ಸೇನಾ ಮೂಲಗಳು ಖಚಿತ ಪಡಿಸಿವೆ.