ಕರ್ನಾಟಕ

karnataka

ETV Bharat / bharat

ಆಪರೇಷನ್ ಗಂಗಾ: ಇಂದು ಮುಂಜಾನೆ ಉಕ್ರೇನ್‌ನಿಂದ ತವರಿಗೆ ಮರಳಿದ 250 ಭಾರತೀಯರು - ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು

ಯುದ್ಧಪೀಡಿತ ಉಕ್ರೇನ್‌ ದೇಶದಿಂದ ಭಾರತೀಯ ವಿದ್ಯಾರ್ಥಿಗಳು, ನಾಗರಿಕರನ್ನು 'ಆಪರೇಷನ್ ಗಂಗಾ' ಹೆಸರಿನಲ್ಲಿ ಭಾರತ ಸರ್ಕಾರ ವಾಪಸ್ ಕರೆಯಿಸಿಕೊಳ್ಳುತ್ತಿದ್ದು, ಭಾರತೀಯರನ್ನು ಹೊತ್ತ 2ನೇ ಏರ್ ಇಂಡಿಯಾ ವಿಮಾನ ಇಂದು ಮುಂಜಾನೆ ನವದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

Operation Ganga
Operation Ganga

By

Published : Feb 27, 2022, 7:06 AM IST

Updated : Feb 27, 2022, 7:24 AM IST

ನವದೆಹಲಿ: 250 ಭಾರತೀಯ ನಾಗರಿಕರನ್ನು ಹೊತ್ತ ಎರಡನೇ ಏರ್ ಇಂಡಿಯಾ ವಿಮಾನ ನವದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ 2.45ಕ್ಕೆ ಬಂದಿಳಿಯಿತು.

ಈ ವಿಮಾನ ರನ್‌ವೇ ಸ್ಪರ್ಶಿಸುತ್ತಿದ್ದಂತೆ ರಷ್ಯಾ-ಉಕ್ರೇನ್‌ ಸಂಘರ್ಷದಲ್ಲಿ ಸಿಲುಕಿ ಪ್ರಾಣಭಯದಿಂದ ಒದ್ದಾಡಿದ ಭಾರತೀಯ ನಾಗರಿಕರು ಅರೆಕ್ಷಣ ನಿಟ್ಟುಸಿರುಬಿಟ್ಟರು, ನಿರಾಳರಾದರು. ವಿಮಾನದಲ್ಲಿದ್ದ ಎಲ್ಲರ ಮೊಗದಲ್ಲೂ ಮುಗುಳುನಗೆ ಕಾಣುತ್ತಿತ್ತು.

ಉಕ್ರೇನ್‌ ನೆರೆದೇಶ ರೊಮೇನಿಯಾ ರಾಜಧಾನಿ ಬುಚಾರೆಸ್ಟ್‌ ನಗರದಿಂದ ಕಳೆದ ರಾತ್ರಿ ಈ ವಿಮಾನ ಟೇಕ್‌ ಆಫ್‌ ಆಗಿತ್ತು.

ಏರ್ ಇಂಡಿಯಾ ವಿಮಾನದಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ಈ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ಭಾರತೀಯ ನಾಗರಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಭಾರತೀಯ ನಾಗರಿಕರಿಗೆ ಗುಲಾಬಿ ಹೂ ನೀಡಿ ತಾಯ್ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್‌ ಅಧ್ಯಕ್ಷರು ಹಾಗು ರಷ್ಯಾ ಸರ್ಕಾರದ ಜೊತೆ ನಿರಂತರ ಮಾತುಕತೆ ನಡೆಸಿದ್ದು, ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರುವ ಬಗ್ಗೆ ಸಂವಾದ ನಡೆದಿದೆ. ಇದಕ್ಕೆ ಅಹರ್ನಿಶಿ ಶ್ರಮಪಟ್ಟ ಏರ್ ಇಂಡಿಯಾ ಸಿಬ್ಬಂದಿಯನ್ನು ಅಭಿನಂದಿಸಿದರು.

ಏರ್‌ ಇಂಡಿಯಾ ಕ್ಯಾಪ್ಟನ್ ಅಂಚಿತ್ ಭಾರದ್ವಾಜ್‌ ಮಾತನಾಡಿ, 'ರೊಮೇನಿಯಾದಿಂದ ಟೆಹ್ರಾನ್ ಮತ್ತು ಪಾಕಿಸ್ತಾನದ ಮೂಲಕ ಸಾಗಿ ಬರಲು ನಮಗೆ ಏರ್‌ ಟ್ರಾಫಿಕ್‌ ಕಂಟ್ರೋಲ್‌(ಎಟಿಸಿ) ಮೂಲಕ ಉತ್ತಮ ಸಹಕಾರ ಸಿಕ್ಕಿತು. ನಾವು ಕೇಳದೆಯೇ ನಮಗೆ ನೇರಹಾದಿಯನ್ನು ಯಾವುದೇ ಅಡಚಣೆ ಇಲ್ಲದೆ ಕೊಟ್ಟಿದ್ದು, ಯಶಸ್ವಿಯಾಗಿ ಭಾರತಕ್ಕೆ ಆಗಮಿಸಲು ಸಾಧ್ಯವಾಯಿತು. ಇದು ನಮಗೆ ವಿಶೇಷ ಅನುಭವ ನೀಡಿದೆ' ಎಂದು ವಿವರಿಸಿದರು.

ಉಕ್ರೇನ್‌ ದೇಶದಿಂದ ಮರಳಿದ ಭಾರತೀಯರ ಪ್ರತಿಕ್ರಿಯೆ

ಏರ್‌ ಇಂಡಿಯಾ ಕ್ಯಾಬಿನ್ ಕ್ರೂ ಇನ್‌ಚಾರ್ಜ್‌ ರಜನಿ ಪೌಲ್‌ ಪ್ರತಿಕ್ರಿಯಿಸಿ, 'ಯುಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿದ್ದಕ್ಕೆ ನಮಗೆ ಹೆಮ್ಮೆ ಅನ್ನಿಸುತ್ತಿದೆ. ಕೆಲವು ವಿದ್ಯಾರ್ಥಿಗಳು ಸೂಚಿಸಿದ ಪಿಕ್‌ ಅಪ್ ಪಾಯಿಂಟ್‌ಗೆ ಲಗೇಜು ಸಮೇತ 9-10 ಕಿ.ಮೀ ನಡೆದೇ ಬಂದರು. ಭಾರತ ಸರ್ಕಾರಕ್ಕೆ ಧನ್ಯವಾದಗಳು' ಎಂದು ಸಂತಸ ಹಂಚಿಕೊಂಡರು.

ಇದೇ ವೇಳೆ ವಿದ್ಯಾರ್ಥಿನಿಯೊಬ್ಬರು ಅನುಭವ ಹಂಚಿಕೊಳ್ಳುತ್ತಾ, 'ಉಕ್ರೇನ್‌ನ ಹಲವು ಸ್ಥಳಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿನ ನಾಗರಿಕರು ತಮ್ಮ ದೇಶವನ್ನು ಸಂರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ನಾವಿದ್ದ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳೂ ಸೇರಿ ಇನ್ನಿತರ ಸಾಮಗ್ರಿಗಳನ್ನು ಸಂಗ್ರಹಿಸಿಕೊಟ್ಟುಕೊಳ್ಳುತ್ತಿದ್ದರು' ಎಂದರು.

ಯುದ್ಧಪೀಡೀತ ಉಕ್ರೇನ್‌ ದೇಶದಿಂದ ಭಾರತೀಯ ವಿದ್ಯಾರ್ಥಿಗಳು, ನಾಗರಿಕರನ್ನು ಆಪರೇಷನ್ ಗಂಗಾ ಹೆಸರಿನಲ್ಲಿ ಭಾರತ ಸರ್ಕಾರ ವಾಪಸ್ ಕರೆಯಿಸಿಕೊಳ್ಳುತ್ತಿದೆ. ಇನ್ನು ಮೂರನೇ ಏರ್‌ ಇಂಡಿಯಾ ವಿಮಾನ ಹಂಗೇರಿಯ ಬುಡಾಪೆಸ್ಟ್‌ ನಗರಿಂದ ಇಂದು ನವದೆಹಲಿಗೆ ಆಗಮಿಸಲಿದೆ.

Last Updated : Feb 27, 2022, 7:24 AM IST

ABOUT THE AUTHOR

...view details