ನವದೆಹಲಿ:ಕೋವಿಡ್ ಸೋಂಕಿನ ಭೀತಿಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣಕ್ಕೆ ಮತ್ತೊಂದು ಅವಕಾಶ ನೀಡುವಂತೆ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದು, ಈ ವಿಚಾರದಲ್ಲಿ ಅಸ್ಪಷ್ಟ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
2020ರಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆ ಹುದ್ದೆಗಳ ಪರೀಕ್ಷೆಗಳಲ್ಲಿ ಕೋವಿಡ್ ಭೀತಿಯಿಂದ ಸಾಕಷ್ಟು ಮಂದಿ ಅಭ್ಯರ್ಥಿಗಳು ಭಾಗಿಯಾಗಿರಲಿಲ್ಲ. ಈ ವಿಚಾರವಾಗಿ ಕೆಲವು ಅಭ್ಯರ್ಥಿಗಳು ಮನವಿ ಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಸ್ಪಷ್ಟ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇದು ಮಹತ್ವದ ವಿಚಾರವಾದ ಕಾರಣ ಉನ್ನತಾಧಿಕಾರಿಗಳು ಅಫಿಡವಿಟ್ ಸಲ್ಲಿಸಬೇಕಿತ್ತು. ಈಗ ಸಲ್ಲಿಸಿರುವ ಅಫಿಡವಿಟ್ ಕಾರ್ಯದರ್ಶಿ ಅಧೀನದಲ್ಲಿ ಸಲ್ಲಿಸಲಾಗಿದೆ. ಇದೊಂದು ವಾಡಿಕೆಯ ಅಫಿಡವಿಟ್ ಆಗಿದೆ ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು ಹೇಳಿದೆ.