ನವದೆಹಲಿ:ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು, "ಈ ಆದೇಶವು ಮಧ್ಯಂತರ ಸ್ವರೂಪದ್ದಾಗಿರುವುದರಿಂದ, ನಾವು ಅದರಲ್ಲಿ ಹಸ್ತಕ್ಷೇಪ ಮಾಡಲು ಒಲವು ತೋರುವುದಿಲ್ಲ ಎಂದು ಹೇಳಿದೆ.
ಜೂನ್ 12, 2023 ರಂದು ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ. "ಆದಾಗ್ಯೂ, ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಸಿಬಿಐ ಸಲ್ಲಿಸಿದ ಅರ್ಜಿ ಮತ್ತು ತನ್ನ ಮುಂದೆ ಬಾಕಿ ಇರುವ ಮೇಲ್ಮನವಿಯನ್ನು ಹೈಕೋರ್ಟ್ ಆದಷ್ಟು ಬೇಗ ಹಾಗೂ ಎರಡು ವಾರಗಳಲ್ಲಿ ಆಲಿಸಿ ವಿಲೇವಾರಿ ಮಾಡಬೇಕು ಎಂದು ಪೀಠ ಕೋರಿದೆ.
2019ರ ಸೆಪ್ಟೆಂಬರ್ 25ರಂದು ಅಂದಿನ ಬಿ.ಎಸ್.ಯಡಿಯೂರಪ್ಪ ಸರ್ಕಾರ ಹೊರಡಿಸಿದ್ದ ಆದೇಶದ ವಿರುದ್ಧ ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠವು ಏಪ್ರಿಲ್ 2023 ರಲ್ಲಿ ಅವರ ಮನವಿಯನ್ನು ವಜಾಗೊಳಿಸಿತ್ತು. ಹೆಚ್ಎಎಲ್ ಉದ್ಯೋಗಿ ಶಶಿಕುಮಾರ್ ಶಿವಣ್ಣ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸಮನ್ವಯ ಪೀಠದ ಆದೇಶವು ತನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಿವಕುಮಾರ್ ಮೇಲ್ಮನವಿಯಲ್ಲಿ ವಾದಿಸಿದ್ದರು.
ಶಿವಕುಮಾರ್ ಅವರು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾಗ ಏಪ್ರಿಲ್ 1, 2013 ರಿಂದ ಏಪ್ರಿಲ್ 30, 2018 ರವರೆಗೆ 74.93 ಕೋಟಿ ರೂ.ಗಳ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.