ನವದೆಹಲಿ: ಅತ್ಯಾಚಾರ ಹಾಗೂ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಸ್ಯಾಮ್ ಹಿಗ್ಗಿನ್ಬಾಟಮ್ ಕೃಷಿ, ತಂತ್ರಜ್ಞಾನ ಹಾಗೂ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ರಾಜೇಂದ್ರ ಬಿಹಾರಿ ಲಾಲ್ ಮತ್ತು ಇತರ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
2023ರ ಡಿಸೆಂಬರ್ 20ಕ್ಕೆ ರಾಜೇಂದ್ರ ಬಿಹಾರಿ ಲಾಲ್ ಹಾಗೂ ಇತರ ಬೋಧಕರ ಸಿಬ್ಬಂದಿ ಶರಣಾಗುವಂತೆ ಆದೇಶಿಸಿದ್ದ ಅಲಹಾಬಾದ್ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಹಾಗೂ ಕೆ. ವಿ. ವಿಶ್ವನಾಥನ್ ಅವರಿದ್ದ ರಜಾಕಾಲದ ಪೀಠ ಈ ಆದೇಶವನ್ನು ನೀಡಿದೆ. ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು, 2005ರಲ್ಲಿ ತಮ್ಮ ಮೇಲೆ ಬಲವಂತದ ಮತಾಂತರ ಪ್ರಯತ್ನ ನಡೆದಿತ್ತು ಹಾಗೂ ನಂತರದಲ್ಲಿ ಅತ್ಯಾಚಾರ ನಡೆದಿತ್ತು ಎಂದು ಆರೋಪಿಸಿ, 2023ರ ನವೆಂಬರ್ 4 ರಂದು ಜಿಲ್ಲೆಯ ಹಮೀರ್ಪುರದಲ್ಲಿ ಎಫ್ಐಆರ್ ದಾಖಲಿಸಿದ್ದರು.
ಈ ಎಫ್ಐಆರ್ಗೆ ಸಂಬಂಧಿಸಿ ವಿವಿಯ ಉಪಕುಲಪತಿ ರಾಜೇಂದ್ರ ಬಿಹಾರಿ ಲಾಲ್ ಹಾಗೂ ಇತರ ಐವರು ಪ್ರಾಧ್ಯಾಪಕರು ಡಿಸೆಂಬರ್ 20ರಂದು ಶರಣಾಗುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ಎಸ್ಎಚ್ಯುಎಟಿಎಸ್ನ ನಿರ್ದೇಶಕ ವಿನೋದ್ ಬಿಹಾರಿ ಲಾಲ್, ಅವರ ಸಹೋದರ ವಿವಿಯ ಉಪಕುಲಪತಿ ರಾಜೇಂದ್ರ ಬಿಹಾರಿ ಲಾಲ್ ಹಾಗೂ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದ ಇತರ ಐವರು ಪ್ರಾಧ್ಯಾಪಕರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.